ಡಯಾನ ಎಡುಲ್ಜಿಗೆ ‘ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪುರಸ್ಕಾರ’

Update: 2018-04-28 14:28 GMT

ಹೊಸದಿಲ್ಲಿ, ಎ.28: ಭಾರತದ ಮಹಿಳಾ ಕ್ರಿಕೆಟ್ ತಂಡ 1976ರಲ್ಲಿ ಆಡಿದ ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿದ್ದ ಖ್ಯಾತ ಆಲ್‌ರೌಂಡರ್ ಡಯಾನಾ ಎಡುಲ್ಜಿ ಅವರನ್ನು ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಘೋಷಿಸಿದೆ.

ಎಡುಲ್ಜಿ ಈಗ ಬಿಸಿಸಿಐಗೆ ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತಗಾರರ ಸಮಿತಿಯ ಸದಸ್ಯರಾಗಿದ್ದಾರೆ. ಎಡುಲ್ಜಿ ಸಮಕಾಲೀನ ಆಟಗಾರ್ತಿಯರಾದ ಶುಭಾಂಗಿ ಕುಲಕರ್ಣಿ ಹಾಗೂ ಸುಧಾ ಶಾ ಅವರನ್ನೂ ಈ ಪುರಸ್ಕಾರಕ್ಕೆ ಪರಿಗಣಿಸಲಾಗಿದ್ದರೂ ಅಂತಿಮವಾಗಿ ಎಡುಲ್ಜಿ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಪಂಕಜ್ ರಾಯ್‌ಗೆ ಮರಣೋತ್ತರ ಪುರಸ್ಕಾರ ಹಾಗೂ ಮತ್ತೋರ್ವ ಖ್ಯಾತ ಕ್ರಿಕೆಟಿಗ ಅಬ್ಬಾಸ್ ಅಲಿ ಬೇಗ್‌ಗೆ ವಿಶೇಷ ಪುರಸ್ಕಾರ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಡಯಾನಾ ಎಡುಲ್ಜಿ, ಶುಭಾಂಗಿ ಕುಲಕರ್ಣಿ ಹಾಗೂ ಸುಧಾ ಶಾ ಭಾರತದ ಮಹಿಳಾ ಕ್ರಿಕೆಟ್ ತಂಡದ ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಆಲ್‌ರೌಂಡರ್‌ಗಳಾಗಿದ್ದ ಡಯಾನಾ ಹಾಗೂ ಶುಭಾಂಗಿ ಭಾರತದ ಪರ ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಶುಭಾಂಗಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 700 ಮತ್ತು 307 ರನ್ ಗಳಿಸಿದ್ದರೆ ಡಯಾನಾ ಕ್ರಮವಾಗಿ 404 ಹಾಗೂ 211 ರನ್ ಗಳಿಸಿದ್ದಾರೆ. ಶುಭಾಂಗಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 60 ಹಾಗೂ 38 ವಿಕೆಟ್ ಗಳಿಸಿದ್ದರೆ, ಡಯಾನಾ ಕ್ರಮವಾಗಿ 63 ಹಾಗೂ 46 ವಿಕೆಟ್ ಗಳಿಸಿದ್ದಾರೆ. ಸುಧಾ ಶಾ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಅನುಕ್ರಮವಾಗಿ 601 ಹಾಗೂ 293 ರನ್ ಪೇರಿಸಿದ್ದಾರೆ. ಶುಭಾಂಗಿ 19 ಟೆಸ್ಟ್ ಪಂದ್ಯ, ಎಡುಲ್ಜಿ 20 ಹಾಗೂ ಸುಧಾ 21 ಟೆಸ್ಟ್ ಪಂದ್ಯ ಆಡಿದ್ದಾರೆ. ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ಗೌರವ, ಆಕರ್ಷಣೆ ತಂದುಕೊಟ್ಟ ಆಟಗಾರ್ತಿಯರಲ್ಲಿ ಡಯನಾ ಎಡುಲ್ಜಿ ಒಬ್ಬರು. ಅಂದಿನ ದಿನದಲ್ಲಿ ಎಡುಲ್ಜಿ ದೇಶದಲ್ಲಿ ಅತ್ಯಂತ ಜನಪ್ರಿಯ ಆಟಗಾರ್ತಿಯಾಗಿದ್ದರು. ಅವರಿಗೆ ಅರ್ಹವಾಗಿಯೇ ಪುರಸ್ಕಾರ ಸಂದಿದೆ ಎಂದು ಬಿಸಿಸಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News