ಯಕ್ಷಗಾನ ಕಲೆಯಲ್ಲಿ ಪುರಾಣದ ಸ್ಪರ್ಶ: ಪಲಿಮಾರು ಸ್ವಾಮೀಜಿ

Update: 2018-04-28 14:29 GMT

ಉಡುಪಿ, ಎ.28: ಯಕ್ಷಗಾನದಲ್ಲಿ ಪ್ರಾಚೀನತೆ, ಪರಂಪರೆ, ಇತಿಹಾಸ, ಸಂಸ್ಕೃತಿ, ಮಣ್ಣಿನ ಸೌರಭ ತುಂಬಿಕೊಂಡಿದೆ. ಕಲ್ಪನೆಯಲ್ಲೂ ಪುರಾಣದ ಸ್ಪರ್ಶ ಯಕ್ಷಗಾನ ಕಲೆಯಲ್ಲಿ ಇದೆ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಸುರತ್ಕಲ್ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ವೇದಿಕೆ ಮತ್ತು ಉಡುಪಿ ಶೇವಧಿ ಪ್ರಕಾಶನದ ಸಹಯೋಗದಲ್ಲಿ ಅಗರಿ ಭಾಸ್ಕರ ರಾವ್ ವಿರಚಿತ ಯಕ್ಷಗಾನ ಪ್ರಸಂಗ ಸಂಪುಟ ‘ಪ್ರಸಂಗದಶಕ’ ಮತ್ತು ಡಾ.ಮಹಾಬಲೇಶ್ವರ ರಾವ್ ಸಂಪಾದಿಸಿದ ಯಕ್ಷಗಾನ ಕವಿ ಆಗುಂಬೆ ಅನಂತಮೂರ್ತಿ ಹೆಬ್ಬಾರರ ‘ಪ್ರಸಂಗ-ಸ್ಮರಣ’ ಪುಸ್ತಕವನ್ನು ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಯಕ್ಷಗಾನ ಹಾಗೂ ನಾಟಕಗಳು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸಿನೆಮಾ, ಸಾಮಾಜಿಕ ಜಾಲತಾಣ, ಮೊಬೈಲ್ ಫೋನ್ ಹಾವಳಿ ದೊಡ್ಡ ತೊಡಕಾಗಿ ಪರಿಣಮಿಸಿದೆ. ಇವುಗಳ ಮಧ್ಯೆ ಯಕ್ಷಗಾನ ರಾರಾಜಿಸುತ್ತಿರಲು ಈ ಮಣ್ಣಿನ ಪುಣ್ಯವೇ ಕಾರಣ ಎಂದು ಅವರು ಹೇಳಿದರು.

ಒಂದು ವರ್ಗಕ್ಕೆ ಸೀಮಿತವಾಗಿದ್ದ ಯಕ್ಷಗಾನವು ವಿದ್ವಾಂಸರ ಪ್ರವೇಶದಿಂದ ವಿಜೃಂಭಿಸಲು ಆರಂಭವಾಯಿತು. ಯಕ್ಷಗಾನದಲ್ಲಿ ಹೊಸ ಹೊಸ ಪ್ರಸಂಗಗಳ ಆವಿಷ್ಕಾರದಿಂದ ಅದರ ವೈಭವ ಹೆಚ್ಚಾಗುತ್ತಿದೆ. ಇದುವೇ ಯಕ್ಷಗಾನ ಕಲೆಯ ಆಶಾಕಿರಣ. ಯುವ ಜನತೆ ಮೊಬೈಲ್ ಪ್ರಪಂಚದಿಂದ ದೂರ ಆಗಬೇಕಾದರೆ ಯಕ್ಷಗಾನದಲ್ಲಿ ಹೊಸ ಹೊಸ ಪ್ರಸಂಗಗಳು ಬರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣುಭಟ್ ಹಾಗೂ ಉಡುಪಿ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವ ಯಾಧಿಕಾರಿ ಡಾ.ಮಹಾಬಲೇಶ್ವರ ರಾವ್ ಕೃತಿಯ ಕುರಿತು ಮಾತನಾಡಿದರು. ಎಂಐಟಿಯ ಉಪನ್ಯಾಸಕ ಉದಯಕುಮಾರ್ ಶೆಟ್ಟಿ, ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ವೇದಿಕೆಯ ಗೌರವಾಧ್ಯಕ್ಷ ಅಗರಿ ರಘುರಾಮ ಭಾಗವತ, ಕವಿ ಅಗರಿ ಭಾಸ್ಕರ ರಾವ್ ಉಪಸ್ಥಿತರಿದ್ದರು.

ಶೇವಧಿ ಪ್ರಕಾಶನದ ಪ್ರವರ್ತಕ ಪ್ರೊ.ಹೆರಂಜೆ ಕೃಷ್ಣ ಭಟ್ ಸ್ವಾಗತಿಸಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಅಪ್ರಮೇಯಿ ಸುಪ್ರತಾಪ ಯಕ್ಷಗಾನ ತಾಳಮದ್ದಲೆ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News