×
Ad

ಅಪಾಯದಲ್ಲಿ ದೇಶದ ಸಂವಿಧಾನ: ಜಿಗ್ನೇಶ್ ಮೇವಾನಿ ಆತಂಕ

Update: 2018-04-28 21:37 IST

ಮಂಗಳೂರು, ಎ.28: ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಇಂತಹ ಪಕ್ಷವನ್ನು ಅಧಿಕಾರದಿಂದ ದೂರು ಇಡುವಂತೆ ಗುಜರಾತ್‌ನ ಶಾಸಕ ಹಾಗೂ ಜನ ಚಳವಳಿಯ ನಾಯಕ ಜಿಗ್ನೇಶ್ ಮೇವಾನಿ ಕರೆ ನೀಡಿದ್ದಾರೆ.

ಸಂವಿಧಾನ ಉಳಿವಿಗಾಗಿ ಕರ್ನಾಟಕ ವತಿಯಿಂದ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಬಳಿಯ ಯುನಿಟಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸ್ವಾಭಿಮಾನಿ ಸಮಾವೇಶ’ವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಜನಪ್ರತಿನಿಧಿಗಳೇ ಸಂವಿಧಾನ ಬದಲಾಯಿಸುವ ಬೆದರಿಕೆ ಒಡ್ಡುತ್ತಿದ್ದಾರೆ. ಪ್ರಜಾತಂತ್ರ ಮತ್ತು ಸಂವಿಧಾನದ ಉಳಿವಿಗಾಗಿ ಯಾರನ್ನು ಅಧಿಕಾರದಿಂದ ದೂರ ಇರಿಸಬೇಕು ಮತ್ತು ಯಾರ ಕೈಗೆ ಅಧಿಕಾರ ನೀಡಬೇಕೆಂಬುದನ್ನು ಮತದಾರರು ಯೋಗ್ಯ ನಿರ್ಧಾ ರ ಕೈಗೊಳ್ಳಬೇಕು. ಇಂತಹ ಸನ್ನಿವೇಶದಲ್ಲಿ ತಮ್ಮ ಅಮೂಲ್ಯ ಮತಗಳು ವಿಭಜನೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿಗ್ನೇಶ್ ಸಲಹೆ ನೀಡಿದರು.

ಕೋಮುವಾದಿ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸುವ ಪಕ್ಷವನ್ನು ಸಾರಸಗಟಾಗಿ ತಿರಸ್ಕರಿಸುವಂತೆ ಕರೆ ನೀಡಿದ ಮೇವಾನಿ, ಮೈಸೂರಿನ ವಿಧಾನಸಭಾ ಕ್ಷೇತ್ರವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಅದೇ ಪಕ್ಷದವರು ಹೇಳುತ್ತಿದ್ದಾರೆ. ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸುವ ಯಾವ ಪಕ್ಷದ ಪರವಾಗಿಯೂ ಮತ ಚಲಾಯಿಸಬೇಡಿ ಎಂದರು.

ಬಿಜೆಪಿಗರಿಗೆ ಸಿದ್ಧಾಂತ ಇಲ್ಲ: ಪ್ರಕಾಶ್ ರೈ
ಬಿಜೆಪಿಗೆ ಸಿದ್ಧಾಂತ ಇಲ್ಲದಿರುವುದರಿಂದ ಅಂತಹವರಿಗೆ ಅಧಿಕಾರ ನೀಡಲು ಸಾಧ್ಯವಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.
ಜಾತ್ಯತೀತದ ಹೆಸರಿನಲ್ಲಿ ಪಕ್ಷ ಕಟ್ಟಿಕೊಂಡು ಇದೀಗ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿರುವ ಜೆಡಿಎಸ್ ಪಕ್ಷದ ನಡೆಯನ್ನು ಟೀಕಿಸಿದ ಪ್ರಕಾಶ್ ರೈ, ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಪ್ರಗತಿಪರ ಚಿಂತಕ ಭೂಮಿಗೌಡ, ಮಂಗಳೂರು ಕುದ್ಮುಲ್ ರಂಗರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಕೇಶವ ಧರಣಿ, ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ, ಕುಲಾಲ ಸಮಾಜದ ಮುಖಂಡ ಪುಂಡರೀಕಾಕ್ಷ ಯು., ದಲಿತ ಮುಖಂಡ ಎಂ.ದೇವದಾಸ್, ಅಮೀನ್ ಹಸನ್, ಮುಸ್ತಫ ಕೆಂಪಿ, ಪ್ರವೀಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಉಮರ್ ಯು.ಎಚ್. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News