ಬಂಟ್ವಾಳದ ಕೆಲವೆಡೆ ಮನೆಯ ಗೋಡೆಗಳಲ್ಲಿ ಕೋಮು ಪ್ರಚೋದನಕಾರಿ ಭಿತ್ತಿಪತ್ರ

Update: 2018-04-29 03:36 GMT
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೊ 

ಬಂಟ್ವಾಳ, ಎ.29: ಕನ್ಯಾನ ಗ್ರಾಮದ ಕೆಲವು ಮನೆಗಳಲ್ಲಿ 'ಕಾಂಗ್ರೆಸ್ ಪಕ್ಷದವರಿಗೆ ಈ ಮನೆಗೆ ಪ್ರವೇಶವಿಲ್ಲ' ಸೇರಿದಂತೆ ಕೋಮು ಪ್ರಚೋದನಕಾರಿ  ಭಿತ್ತಿಪತ್ರಗಳನ್ನು ಮನೆಗಳ ಗೋಡೆಗಳಿಗೆ ಅಂಟಿಸಿರುವ ಬಗ್ಗೆ ವಾಟ್ಸ್‌ಆಪ್ ಸಂದೇಶಗಳು ವೈರಲ್ ಆಗಿದೆ. 

ಕೆಲವು ದಿನಗಳ ಹಿಂದೆ ಕೆಲವು ಮನೆಗಳ ಗೋಡೆಗಳಲ್ಲಿ ಈ ರೀತಿಯಾದ ಕೋಮು ಪ್ರಚೋದನಕಾರಿ ಬರಹಗಳುಳ್ಳ ಭಿತ್ತಿಪತ್ರ ಅಂಟಿಸಿರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಚಾರವಾಗಿ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಪೊಲೀಸರ ತಂಡ ಮನೆಮನೆಗೆ ಭೇಟಿ ನೀಡಿ ತನಿಖೆ ನಡೆಸಿತ್ತು. "ಇದು ಹಿಂದು ಮನೆ. ಗಣ್ಯಶ್ರೀಯನ್ನು ಕಪಟ ಪ್ರೇಮದಿಂದ ಮತಾಂತರ ಮಾಡಲು ಬೆಂಬಲಿಸಿದ ಕಾಂಗ್ರೆಸಿಗರಿಗೆ ಇಲ್ಲಿ ಪ್ರವೇಶವಿಲ್ಲ. ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ" ಎಂದು ಬರೆದ ಫಲಕಗಳು ಕೆಲವು ಮನೆಗಳಲ್ಲಿ ಅಧಿಕಾರಿಗಳಿಗೆ ದೊರೆತಿತ್ತು. ಈ ಸಂಬಂಧ ಓರ್ವನ ಮೇಲೆ ಪ್ರಕರಣವೂ ದಾಖಲಾಗಿತ್ತು. ಅಧಿಕಾರಿಗಳು ಮನೆ ಮಂದಿಯಿಂದ ಫಲಕ ಅಂಟಿಸಿದ ಬಗ್ಗೆ ಹೇಳಿಕೆ ಪಡೆದು ಮಹಜರು ನಡೆಸಿದ್ದಾರೆ. ಕೆಲವು ಭಾಗದಲ್ಲಿ ಇಂತಹ ಫಲಕಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ತೆರವು ಮಾಡಿದ್ದಾರೆನ್ನಲಾಗಿದೆ.

ಇದೀಗ ಮತ್ತೆ ಇಂತಹ ಬರಹಗಳ ಫಲಕಗಳನ್ನು ಹಾಕಿರುವ ಬಗ್ಗೆ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. "ಇದು ಹಿಂದು ಮನೆ. ಬಡಮಕ್ಕಳ ಅನ್ನ ಕದ್ದವರಿಗೆ ಮತ್ತು ಅಲ್ಲಾಹುವಿನ ಕೃಪೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷದವರಿಗೆ ಈ ಮನೆಗೆ ಪ್ರವೇಶವಿಲ್ಲ" ಎಂಬ ಬರಹಗಳುಳ್ಳ ಭಿತ್ತಿಪತ್ರಗಳನ್ನು ಅಂಟಿಸಿರುವ ಬಗ್ಗೆ ಫೋಟೊ ಸಹಿತ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂತಹ ಕೋಮು ಪ್ರಚೋದಕ ಕೃತ್ಯ ಎಸಗುತ್ತಿರುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News