ಉಡುಪಿ: ಮೋದಿ ಕಾರ್ಯಕ್ರಮಕ್ಕೆ ಪೆಂಡಲ್ ಸಾಗಿಸುತ್ತಿದ್ದ ಟೆಂಪೋ ಅಪಘಾತ; ಮೂವರು ಮೃತ್ಯು

Update: 2018-04-29 15:37 GMT

ಉಡುಪಿ, ಎ.29: ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಮೇ 1ರಂದು ನಡೆಯುವ ಮೋದಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಪೆಂಡಾಲ್ ಸಾಗಿಸುತ್ತಿದ್ದ ಈಚರ್ ಟೆಂಪೊವೊಂದು ಇಂದು ಬೆಳಗ್ಗೆ 7.30ರ ಸುಮಾರಿಗೆ ಪೆರ್ಡೂರು ಸಮೀಪದ ಪಕ್ಕಾಲು ಚೌಂಡಿನಗರ ಎಂಬಲ್ಲಿ ಅಪಘಾತಕ್ಕೀಡಾದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟು, 9 ಮಂದಿ ಗಾಯಗೊಂಡಿದ್ದಾರೆ.

ಅಸ್ಸಾಂ ಮೂಲದ ಪಮ್ಮಿ ಪೇಗು (28) ಹಾಗೂ ಬಚ್ಚನ್ ಪೇಗು ಯಾನೆ ಮಾಂತ್ರೋ ಪೇಗು (30) ಮತ್ತು ಚಿತ್ರದುರ್ಗದ ಮೂರ್ತಿ(38) ಮೃತ ಕಾರ್ಮಿಕರು. ಪೆಂಡಾಲ್‌ನ ಮಾಲಕ ಪರಮೇಶ್ವರಪ್ಪ, ಕಾರ್ಮಿಕರಾದ ಇಂದ್ರ ಜಿತ್, ಮುಸಿಲ್ಲಾ, ರವಿ, ಮೋಹನ್, ತಿಪ್ಪೇಸ್ವಾಮಿ, ಆಂಜನಪ್ಪ, ಉಮಾಕಾಂತ ಎಂಬವರು ಗಾಯ ಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಇನ್ನೋರ್ವ ಗಾಯಾಳು ಕಾರ್ಮಿಕನ ಹೆಸರು ಈವರೆಗೆ ತಿಳಿದು ಬಂದಿಲ್ಲ.

ಉಡುಪಿಯಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕುವುದಕ್ಕಾಗಿ ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ವಿಜಯ ಎಂಬವರು ಪರಮೇಶ್ವರಪ್ಪ ಮಾಲಕತ್ವದ ಪೆಂಡಾಲ್ ಅನ್ನು ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿಯಿಂದ 11 ಜನ ಕೆಲಸದವರೊಂದಿಗೆ ಈಚರ್ ವಾಹನದಲ್ಲಿ ಲೋಡ್ ಮಾಡಿಕೊಂಡು ಎ.28ರಂದು ರಾತ್ರಿ 12:30 ಗಂಟೆಗೆ ಹೊರಟಿದ್ದರು.

ವಾಹನದ ಮುಂಭಾಗದಲ್ಲಿ ಚಾಲಕನೊಂದಿಗೆ ವಿಜಯ್ ಹಾಗೂ ಪರ ಮೇಶ್ವರಪ್ಪ ಹಾಗೂ ಹಿಂದುಗಡೆ ಲೋಡ್ ಮೇಲೆ 11 ಮಂದಿ ಕಾರ್ಮಿಕರು ಕುಳಿತುಕೊಂಡಿದ್ದರು. ವಾಹನ ಉಡುಪಿ ಕಡೆಗೆ ಬರುತ್ತಿರುವಾಗ ಪೆರ್ಡೂರು ಸಮೀಪದ ಚೌಂಡಿನಗರ ಎಂಬಲ್ಲಿರುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ಸ್ಕಿಡ್ ಆಗಿ ಬಿದ್ದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ವಾಹನದ ಹಿಂಬದಿ ಲೋಡ್ ಮೇಲೆ ಕುಳಿತುಕೊಂಡಿದ್ದ ಕಾರ್ಮಿಕರು ಮಣ್ಣು ರಸ್ತೆಗೆ ಬಿದ್ದಿದ್ದು, ಅವರ ಮೈಮೇಲೆ ಪೆಂಡಾಲ್ನ ಭಾರದ ಸಾಮಾನುಗಳು ಮತ್ತು ತುಂಡಾದ ವಿದ್ಯುತ್ ತಂತಿ ಬಿತ್ತೆನ್ನಲಾಗಿದೆ. ಕೂಡಲೇ ಮೆಸ್ಕಾಂನವರು ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದು, ಪೆಂಡಾಲ್ನ ಅಡಿಯಲ್ಲಿ ಬಿದ್ದಿದ್ದ ಕಾರ್ಮಿಕರನ್ನು ಸ್ಥಳೀಯರು ಹೊರಗೆ ತೆಗೆದರು.

ಇದರಲ್ಲಿ ಮೂರ್ತಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಮುಂಭಾಗದಲ್ಲಿ ಕುಳಿತಿದ್ದ ವಿಜಯ್ ಹೊರತು ಪಡಿಸಿ ಉಳಿದ 9 ಮಂದಿಗೆ ಗಾಯಗೊಂಡಿದ್ದಾರೆ. ಇವರಲ್ಲಿ ಬಹುತೇಕ ಮಂದಿ ತೀವ್ರ ಸ್ವರೂಪದ ಗಾಯಗಳಾಗಿವೆ. ಅಫಘಾತ ನಡೆಸಿದ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ಸಚಿವ ಪ್ರಮೋದ್ ಭೇಟಿ

ಅಪಘಾತದಿಂದ ಗಾಯಗೊಂಡಿರುವ ಕಾರ್ಮಿಕರನ್ನು ಮಣಿಪಾಲ ಆಸ್ಪತ್ರೆಗೆ ತೆರಳಿ ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಮೃತ ಕಾರ್ಮಿಕರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂತಹ ಭೀಕರ ದುರಂತದ ನಡುವೆಯೂ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ ಹಮ್ಮಿಕೊಳ್ಳುತ್ತಿರುವುದು ಸಂವೇದನಾರಹಿತ ವರ್ತನೆ ಯಾಗಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇರುತ್ತಿದ್ದರೆ ಇಡೀ ಕಾರ್ಯಕ್ರಮವನ್ನು ರದ್ಧುಪಡಿಸುತ್ತಿದ್ದರು. ನಾನು ಆಸ್ಪತ್ರೆಗೆ ಭೇಟಿ ಮಾಡುವವರೆಗೆ ಯಾವುದೇ ಸ್ಥಳೀಯ ಬಿಜೆಪಿ ಮುಖಂಡರು ಆಸ್ಪತ್ರೆ ಅಥವಾ ಶವಗಾರಕ್ಕೆ ಭೇಟಿ ಮಾಡದಿರುವುದು ದುರಂತ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News