×
Ad

ಶಕ್ತಿನಗರ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಮನೆ ನಿರ್ಮಾಣದ ಬಗ್ಗೆ ಗೊಂದಲ ಬೇಡ: ಜೆ.ಆರ್.ಲೋಬೊ

Update: 2018-04-29 18:44 IST

ಮಂಗಳೂರು, ಎ.29: ಶಕ್ತಿ ನಗರದಲ್ಲಿ ನಿವೇಶನ ರಹಿತರಿಗೆ ಆಶ್ರಯ ಸಮಿತಿಯ ಮೂಲಕ ವಸತಿ ಗೃಹಗಳಿಗೆ ಆಯ್ಕೆಯಾದ ಫಲಾನುಭವಿಗಳಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ಸುದ್ದಿ ಗೋಷ್ಠಿಯಲ್ಲಿಂದು ಸ್ಪಷ್ಟ ಪಡಿಸಿದ್ದಾರೆ.

ಶಕ್ತಿ ನಗರದಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಲು ಸತತ ಮೂರು ವರ್ಷದ ಪ್ರಯತ್ನ ನಾನು ಪಟ್ಟಿದ್ದೇನೆ. ಸರಕಾರ 61.50 ಕೋಟಿ ರೂ.ಗಳ 930 ಮನೆಗಳನ್ನು ಜಿಪ್ಲಸ್ ಮಾದರಿಯಲ್ಲಿ ನಿರ್ಮಿಸುವ ಯೋಜನೆಗೆ ಮಂಜೂರಾತಿ ನೀಡಿ ಆದೇಶ ನೀಡಿದೆ. ಟೆಂಡರ್ ಪ್ರಕ್ರೆಯೆ ಪೂರ್ಣಗೊಂಡಿದೆ. ಈ ಬಗ್ಗೆ ದಾಖಲೆಗಳಿವೆ. ಇಷ್ಟು ದಾಖಲೆ ಇದ್ದರೂ ಈ ಬಗ್ಗೆ ಮನಪಾ ಬಿಜೆಪಿ ಸದಸ್ಯರೊಬ್ಬರು ಹಾಗೂ ಸಿಪಿಎಂ ಪಕ್ಷದ ಅಭ್ಯರ್ಥಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಫಲಾನುಭವಿಗಳನ್ನು ಆಯಾವಾರ್ಡಿನ ಮನಪಾ ಸದಸ್ಯರು ಸೇರಿದಂತೆ ಆಶ್ರಯ ಸಮಿತಿ ಆಯ್ಕೆ ಮಾಡಿದೆ. ರಾಜ್ಯದಲ್ಲಿಯೇ ಮಾದರಿಯಾದ ಈ ಯೋಜನೆಯ ಬಗ್ಗೆ ಕೆಲವರು ಆಧಾರ ರಹಿತವಾಗಿ ಮಾಡಿತ್ತಿರುವ ಆರೋಪದಿಂದ ನೋವಾಗಿದೆ ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.

ಲಾಟರಿಯಲ್ಲಿ ಆಯ್ಕೆ:- ಜಿ ಪ್ಲಸ್ ಮಾದರಿಯ ಮನೆಗಳ ಹಂಚಿಕೆಯಲ್ಲಿ ತಾರತಮ್ಯ ಆಗಬಾರದು ಎಂದು ಅಂಗವಿಕಲರಿಗೆ ಕೆಳ ಅಂತಸ್ತನ್ನು ಮೀಸಲಿರಿಸಿ ಉಳಿದ ಫಲಾನುಭವಿಗಳಿಗೆ ಪ್ಲಾಟ್‌ಗಲ ಹಂಚಿಕೆ ಲಾಟರಿ ಮೂಲಕ ಮಾಡಲಾಗಿದೆ.ಈ ಯೋಜನೆ ರಾಜ್ಯ ಸರಕಾರ,ಕೇಂದ್ರ ಸರಕಾರ,ಸ್ಥಳೀಯ ಸಂಸ್ಥೆಗಳು ಹಾಗೂ ಫಲಾನುಭವಿಗಳ ಅನುದಾನದಿಂದ ನಡೆಯಬೇಕಾಗಿದೆ. ಫಲಾನುಭವಿಗಳಿಗೆ ಆರ್ಥಿಕ ಸಮಸ್ಯೆಯಾಗಬಾರದು ಎಂದು ರಾಷ್ಟ್ರೀಯ ಬ್ಯಾಂಕ್‌ಗಳ ಮೂಲಕ ಸಾಲ ಸಹಾಯ ನೀಡುವ ಬಗ್ಗೆ ಮಾತುಕತೆ ಮಾಡಲಾಗಿದೆ. ಈ ಪ್ರಕ್ರೀಯೆ ನಡೆಯುತ್ತಿರುವ ಇ ಹಂತದಲ್ಲಿ ಫಲಾನುಭವಿಗಳಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಸಂಪೂರ್ಣ ರಾಜಕೀಯ ಪ್ರೇರಿತವಾದುದು ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.

ಯಾವ ಫಲಾನುಭವಿಗಳನ್ನು ನಾನು ನೇರವಾಗಿ ಆಯ್ಕೆ ಮಾಡಿಲ್ಲ. ಫಲಾನುಭವಿಗಳನ್ನು ಆಯ್ಕೆ ಮಾಡಿದ ಮನಪಾ ಸದಸ್ಯರೊಬ್ಬರು ಈ ರೀತಿಯ ಹೇಳಿಕೆ ನೀಡುತ್ತಿರುವುದು ಮಾಹಿತಿಯ ಕೊರತೆ ಯಿಂದ ಇರಬೇಕು ಫಲಾನುಭವಿಗೆ ನೀಡಿದ ಮಂಜೂರಾತಿ ಪತ್ರದಲ್ಲಿ ಆಯುಕ್ತರ ಸಹಿ ಇದೆ ಎಂದು ಲೋಬೊ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮನಪಾ ಮೇಯರ್ ಕೆ.ಭಾಸ್ಕರ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಮನಪಾ ಉಪ ಮೇಯರ್ ಮಹಮ್ಮದ್ ಕುಂಜತ್ತ ಬೈಲ್, ಮನಪಾ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೋ, ಕಾಂಗ್ರೆಸ್ ಮುಖಂಡರಾದ ಮರಿಯಮ್ಮ ಥೋಮಸ್, ಟಿ.ಕೆ.ಸುಧೀರ್, ವಿಶ್ವಾಸ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News