×
Ad

“ವಿನಾಯಕ ಬಾಳಿಗಾರನ್ನು ಕೊಲೆ ಮಾಡಿದವರಿಗೆ, ಕೊಲೆಗಾರರನ್ನು ಬೆಂಬಲಿಸುವವರಿಗೆ ಪ್ರವೇಶವಿಲ್ಲ”

Update: 2018-04-29 19:24 IST

ಮಂಗಳೂರು, ಎ.29: “ಇದು 21-3-2016ರಂದು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರಿಗೆ ನ್ಯಾಯ ಕೇಳುವ ಮನೆ. ಇಲ್ಲಿ ಅವರನ್ನು ಕೊಲೆ ಮಾಡಿದವರಿಗೆ, ಕೊಲೆಗಾರರನ್ನು ಬೆಂಬಲಿಸುವರಿಗೆ ಪ್ರವೇಶವಿಲ್ಲ. ಇಂತಹವರು ಯಾರೂ ಇಲ್ಲಿ ಮತಯಾಚನೆಗೆ ಬರಬೇಡಿ”….. ಇದು ದುಷ್ಕರ್ಮಿಗಳಿಂದ ಹತ್ಯೆಯಾದ ವಿನಾಯಕ ಬಾಳಿಗಾರ ಮನೆಯ ಮುಂದೆ ಕುಟುಂಬದವರು ಪ್ರಕಟಿಸಿರುವ ಬ್ಯಾನರ್.

ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಈ ಫೋಟೊವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ “ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಬಿಜೆಪಿ ನಾಯಕರು ಮತ ಕೇಳಿಕೊಂಡು ಮನೆಗೆ ಬರಬೇಡಿ. ಗೇಟಿನ ಹೊರಗಡೆ ನಿಲ್ಲಿ” ಎಂದು ಕೇರಳದ ಮನೆಗಳ ಮುಂದೆ ಪೋಸ್ಟರ್ ಅಂಟಿಸಿದ್ದದ್ದು ಭಾರೀ ಸುದ್ದಿಯಾಗಿತ್ತು. ಕಥುವಾ ಹಾಗು ಉನ್ನಾವೋ ಪ್ರಕರಣಗಳ ನಂತರ ಈ ಅಭಿಯಾನವು ಆರಂಭಗೊಂಡಿತ್ತು.
ಇದಾದ ನಂತರ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲೂ ಮನೆಗಳ ಮುಂದೆ ಪೋಸ್ಟರ್ ಗಳನ್ನು ಅಂಟಿಸುವುದು ಸುದ್ದಿಯಾಗುತ್ತಲೇ ಇದೆ.

2016ರ ಮಾರ್ಚ್ 21ರಂದು ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ ಯುವ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಮುಖ್ಯ ಆರೋಪಿಯಾಗಿದ್ದಾನೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರದ ಆಡಳಿತಾವಧಿಯಲ್ಲಿ ಸಂಘಪರಿವಾರದ ಕಾರ್ಯಕರ್ತರ ಕೊಲೆ ನಡೆದಿದೆ ಎಂದು ಹೇಳುವ ಬಿಜೆಪಿ ನಾಯಕರು ವಿನಾಯಕ ಬಾಳಿಗಾ ಪ್ರಕರಣದಲ್ಲಿ ಮೌನವಾಗಿದ್ದರು ಎನ್ನುವ ಆರೋಪಗಳು ಈ ಹಿಂದೆ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News