2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

Update: 2018-04-29 16:27 GMT

ಹೊಸದಿಲ್ಲಿ, ಎ. 29: ರಾಷ್ಟ್ರ ರಾಜಧಾನಿಯಲ್ಲಿ ರವಿವಾರ ಸಾರ್ವಜನಿಕ ರ್ಯಾಲಿಯಲ್ಲಿ ಪಕ್ಷದ 2019ರ ಸಾರ್ವತ್ರಿಕ ಚುನಾವಣೆಯ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸೂಚಿಸಿದರು. ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆ ಮೀರಿದ ನಿರ್ವಹಣೆ ತೋರಿದೆ. ಮಧ್ಯಪ್ರದೇಶ, ಕರ್ನಾಟಕ, ಚತ್ತೀಸ್‌ಗಢ, ರಾಜಸ್ಥಾನದಲ್ಲಿನ ಚುನಾವಣೆಗಳಲ್ಲಿ ನಾವು ಜಯಗಳಿಸಲಿದ್ದು, ನೀವು ಸಾಕ್ಷಿಗಳಾಗಲಿದ್ದೀರಿ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡಾ ನಾವೇ ಗೆಲ್ಲಲಿದ್ದೇವೆ. ಆದುದರಿಂದ ಕಾಂಗ್ರೆಸ್ ಕಾರ್ಯಕರ್ತರು ಸತ್ಯದ ಬಣದಿಂದ ಪರಿತ್ಯಕ್ತರಾಗಬಾರದು ಎಂದು ಅವರು ಹೇಳಿದರು.

ಹಲವು ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಭ್ರಷ್ಟಾಚಾರ, ಆರ್ಥಿಕತೆಯನ್ನು ಅವ್ಯವಸ್ಥೆ ಮಾಡಿರುವುದು, ಸಾಂವಿಧಾನಿಕ ಸಂಸ್ಥೆಗಳನ್ನು ಕಡೆಗಣಿಸಿರುವುದು ಹಾಗೂ ಮಹಿಳೆಯರಿಗೆ ಸುರಕ್ಷೆ ಒದಗಿಸಲು ವಿಫಲವಾಗಿರುವುದಕ್ಕೆ ಪ್ರಧಾನಿ ಅವರನ್ನು ಟೀಕಿಸಿದರು. ರೈತರ ಸಂಕಷ್ಟ ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ಬಿಕ್ಕಟ್ಟಿನ ಬಗ್ಗೆ ಮೋದಿ ಮೌನ ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು. ಸಾಮಾನ್ಯವಾಗಿ ಸಾರ್ವಜನಿಕರು ನ್ಯಾಯಕ್ಕಾಗಿ ನ್ಯಾಯಾಧೀಶರ ಮುಂದೆ ಹೋಗುತ್ತಾರೆ. ಆದರೆ, 70 ವರ್ಷಗಳಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಸಾರ್ವಜನಿಕರ ಮುಂದೆ ಹೋಗಿದೆ. ಆದರೆ, ಮೋದಿಜಿ ಮೌನವಾಗಿದ್ದರು ಎಂದು ಅವರು ವ್ಯಂಗ್ಯವಾಡಿದ್ದಾರೆ. ಹಿಂದೊಮ್ಮೆ ನಾನು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೆ. ಆಗ ರೈತರ ಸಾಲ ಮನ್ನಾ ಮಾಡಿ ಎಂದು ವಿನಂತಿಸಿದ್ದೆ. ಅದಕ್ಕೆ ಪ್ರಧಾನಿ ಅವರು, ಸಾಲ ಮನ್ನಾ ಮಾಡುವುದು ನಮ್ಮ ನೀತಿ ಅಲ್ಲ ಎಂದು ಹೇಳಿದ್ದರು ಎಂದು ರಾಹುಲ್ ಗಾಂಧಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News