ಸಿಆರ್‌ಪಿಎಫ್ ಸಿಬ್ಬಂದಿಯಿಂದ ಮಹಿಳೆಯ ಮೇಲೆ ಅತ್ಯಾಚಾರ: ಆರೋಪ

Update: 2018-04-29 16:48 GMT

ಜಮ್ಮು, ಎ. 29: ಕೇಂದ್ರ ಮೀಸಲು ಪಡೆಯ ಸಿಬ್ಬಂದಿ ಇಲ್ಲಿನ ಕ್ಯಾಂಪ್‌ನಲ್ಲಿ ತನ್ನನ್ನು ಬಂಧನದಲ್ಲಿರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು 24 ವರ್ಷದ ಮಹಿಳೆಯೋರ್ವರು ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. “ಮಾರ್ಚ್ 10ರಂದು ಸಿಆರ್‌ಪಿಎಫ್‌ನ ಮೂವರು ಸಿಬ್ಬಂದಿ ನನ್ನನ್ನು ತಡೆದು ಕ್ಯಾಂಪ್‌ನ ಒಳಗಡೆ ಕೊಂಡೊಯ್ದರು ಹಾಗೂ ಅವರಲ್ಲಿ ಓರ್ವ ನನ್ನ ಮೇಲೆ ಅತ್ಯಾಚಾರ ಎಸಗಿದ” ಎಂದು ಪೂಂಛ್ ಜಿಲ್ಲೆಯ ಮಂಡಿ ಪ್ರದೇಶದಲ್ಲಿರುವ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ಲಿಖಿತ ದೂರಿನಲ್ಲಿ ಮಹಿಳೆ ಹೇಳಿದ್ದಾರೆ.

ಸಿಆರ್‌ಪಿಎಫ್ ಸಿಬ್ಬಂದಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯವನ್ನು ವೀಡಿಯೊ ಮಾಡಿದ್ದರು ಹಾಗೂ ಘಟನೆಯನ್ನು ಪೊಲೀಸರಲ್ಲಿ ಅಥವಾ ಇತರರಲ್ಲಿ ಬಹಿರಂಗಪಡಿಸಿದರೆ ವೀಡಿಯೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ‘‘ನಾನು ಸಂಜೆ 7.30ಕ್ಕೆ ಬಸ್ಸಿನಿಂದ ಇಳಿದೆ. ಅಲ್ಲಿಂದ ಸಂಬಂಧಿಕರ ಮನೆಗೆ ಹೊರಟೆ. ಈ ಸಂದರ್ಭ ಸಮವಸ್ತ್ರ ಧರಿಸಿದ್ದ ಮೂವರು ಸಿಆರ್‌ಫಿಎಫ್ ಸಿಬ್ಬಂದಿ ಕ್ಯಾಂಪ್‌ನ ಹೊರಗೆ ನನಗೆ ತಡೆ ಒಡ್ಡಿದರು. ನೆರವು ನೀಡುವ ನೆಪದಲ್ಲಿ ಅವರು ನನ್ನನ್ನು ಕ್ಯಾಂಪ್‌ನ ಒಳಗಡೆ ಕರೆದೊಯ್ದರು. ಅವರಲ್ಲಿ ಓರ್ವ ನನ್ನ ಮೇಲೆ ಅತ್ಯಾಚಾರ ಎಸಗಿದ’’ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News