ನ್ಯಾಯಾಧೀಶರ ಹುದ್ದೆಯ ಅಭ್ಯರ್ಥಿಗಳ ದಾಖಲೆ ಪರಿಶೀಲನೆ: ಸರಕಾರದ ಕ್ರಮಕ್ಕೆ ಸುಪ್ರೀಂ ಕೊಲಿಜಿಯಂ ವಿರೋಧ

Update: 2018-04-29 17:29 GMT

ಹೊಸದಿಲ್ಲಿ, ಎ.29: ಹೈಕೋರ್ಟ್‌ನ ಉನ್ನತ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಲ್ಪಟ್ಟಿರುವ ಅಭ್ಯರ್ಥಿಗಳ ವೃತ್ತೀಯ ಕಾರ್ಯದ ದಾಖಲೆಯನ್ನು ವಿವರವಾಗಿ ಪರಿಶೀಲಿಸುವ ಸರಕಾರದ ನಡೆಯನ್ನು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಪ್ರಶ್ನಿಸಿದೆ.

ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿ ಹೈಕೋರ್ಟ್‌ನಿಂದ ಶಿಫಾರಸು ಮಾಡಲ್ಪಟ್ಟಿರುವ ಅಭ್ಯರ್ಥಿಗಳ ದಾಖಲೆಯನ್ನು ವಿವರವಾಗಿ ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು 2017ರ ಜುಲೈಯಲ್ಲಿ ಕಾನೂನು ಸಚಿವಾಲಯವು ಸಂಪುಟ ಕಾರ್ಯದರ್ಶಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿತ್ತು. ನ್ಯಾಯವಾದಿಗಳಾಗಿದ್ದರೆ ಅವರು ನೀಡಿರುವ ತೀರ್ಪು, ನ್ಯಾಯಾಂಗ ಅಧಿಕಾರಿಗಳಾಗಿದ್ದರೆ ಅವರು ಪ್ರಕರಣವನ್ನು ಇತ್ಯರ್ಥಗೊಳಿಸಲು ತೆಗೆದುಕೊಂಡ ಅವಧಿ ಹಾಗೂ ವಿಚಾರಣೆ ಸಂದರ್ಭ ಪ್ರಕರಣವನ್ನು ಎಷ್ಟು ಬಾರಿ ಮುಂದೂಡಲಾಗಿದೆ ಎಂಬುದನ್ನು ಕಾನೂನು ತಜ್ಞರಾಗಿರುವ ಸಂಪುಟ ಸದಸ್ಯರ ತಂಡ ಪರಿಶೀಲಿಸಿ ಮೌಲ್ಯನಿರ್ಣಯ ಮಾಡಲಿದೆ ಎಂದು ತಿಳಿಸಲಾಗಿತ್ತು.

ಆದರೆ ಈ ಕ್ರಮವನ್ನು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಪ್ರಶ್ನಿಸಿದೆ. ಈಗಿನ ಪದ್ದತಿಯಂತೆ, ಹೈಕೋರ್ಟ್‌ನ ಮೂವರು ಸದಸ್ಯರ ಕೊಲಿಜಿಯಂ ಒಂದು ಹೆಸರನ್ನು ಹೈಕೋರ್ಟ್‌ನ ಕೊಲಿಜಿಯಂಗೆ ಶಿಫಾರಸು ಮಾಡಿದರೆ, ಹೈಕೋರ್ಟ್‌ನ ಸಮಿತಿಯು ಅಭ್ಯರ್ಥಿಗಳ ಸಾಧನೆಯ ದಾಖಲೆಯನ್ನು ಸುಪ್ರೀಂಕೋರ್ಟ್‌ನ ಕೊಲಿಜಿಯಂಗೆ ಕಳಿಸಲಾಗುತ್ತದೆ. ಮೊದಲು ಈ ಶಿಫಾರಸನ್ನು ಕಾನೂನು ಸಚಿವಾಲಯಕ್ಕೆ ಕಳಿಸಲಾಗುತ್ತದೆ. ಸಚಿವಾಲಯವು ಅಭ್ಯರ್ಥಿಗಳ ಒಟ್ಟು ದಾಖಲೆಯ ವರದಿಯನ್ನು ಇದಕ್ಕೆ ಲಗತ್ತಿಕರಿಸಿ ಸುಪ್ರೀಂಕೋರ್ಟ್‌ನ ಕೊಲಿಜಿಯಂಗೆ ರವಾನಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News