ಮೋದಿ ಸರಕಾರದ ಕಾರ್ಯವೈಖರಿ ಪ್ರಜಾಪ್ರಭುತ್ವಕ್ಕೆ ಮಾರಕ : ಮನಮೋಹನ್ ಸಿಂಗ್

Update: 2018-04-29 17:34 GMT

ಹೊಸದಿಲ್ಲಿ, ಎ.29: ನರೇಂದ್ರ ಮೋದಿ ನೇತೃತ್ವದ ಸರಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ನಡೆಸುತ್ತಿರುವ ನಿರಂತರ ಪ್ರಯತ್ನದಿಂದಾಗಿ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಮೋದಿ ಸರಕಾರದ ಕಾರ್ಯವೈಖರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆ ಒಡ್ಡುವ ರೀತಿಯಲ್ಲಿದೆ. ಕಳೆದ ಕೆಲ ದಿನಗಳ ಹಿಂದೆ ಸಂಸತ್ತಿನಲ್ಲಿ ಏನು ನಡೆದಿದೆ ಎಂಬುದನ್ನು ದೇಶದ ಜನತೆ ಕಂಡಿದ್ದಾರೆ ಎಂದು ಮನಮೋಹನ್ ಸಿಂಗ್ ಹೇಳಿದರು. ರಾಮ್‌ಲೀಲಾ ಮೈದಾನದಲ್ಲಿ ನಡೆದ ಆಕ್ರೋಶ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಅಧಿಕಾರಕ್ಕೆ ಬರುವ ಮೊದಲು ದೇಶದ ಜನತೆಗೆ ನೀಡಿದ ಭರವಸೆಗಳನ್ನು ಮರೆತುಬಿಟ್ಟಿರುವ ಮೋದಿ ಸರಕಾರ , ತಾನು ಮಾಡಿರುವ ಕಾರ್ಯದ ವರದಿಯನ್ನು ದೇಶದ ಜನತೆಯ ಮುಂದಿಡಬೇಕು. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಜನರಲ್ಲಿ ಸುರಕ್ಷತೆ ಹಾಗೂ ಭದ್ರತೆಯ ಕುರಿತ ಆತಂಕ ಹೆಚ್ಚಾಗುತ್ತಿದೆ. ಅಲ್ಲದೆ ಉದ್ಯೋಗಾವಕಾಶ ಕಡಿಮೆಯಾಗುತ್ತಿರುವುದರಿಂದ ಯುವಜನತೆ ಕಂಗಾಲಾಗಿದ್ದಾರೆ ಎಂದು ಸಿಂಗ್ ಹೇಳಿದರು. ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದಾಳಿಯಿಂದ ಕೇಂದ್ರ ಸರಕಾರ ವಿಚಲಿತಗೊಂಡಿಲ್ಲ ಎಂದು ದೂರಿದ ಅವರು, ವಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಸಂಸತ್ತಿನಲ್ಲಿ ಚರ್ಚೆಗೆ ಎತ್ತಿಕೊಳ್ಳಲು ವಿಫಲವಾದ ಸರಕಾರ, ಈ ನಿರ್ಣಯವನ್ನು ವ್ಯರ್ಥಗೊಳಿಸಲು ಪಿತೂರಿ ಹೂಡಿದೆ ಎಂದು ಆರೋಪಿಸಿದರು.

13,000 ಕೋಟಿ ರೂ. ಮೊತ್ತದ ಪಿಎನ್‌ಬಿ ಹಗರಣವನ್ನು ಉಲ್ಲೇಖಿಸಿದ ಸಿಂಗ್, ಈ ಹಗರಣ ಬ್ಯಾಂಕ್‌ಗಳಿಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದೆ. ವಂಚಕರಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಪಲಾಯನ ಮಾಡಲು ಸರಕಾರ ಪರೋಕ್ಷವಾಗಿ ನೆರವಾಗಿದೆ ಎಂದು ಟೀಕಿಸಿದರು. ರ್ಯಾಲಿಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮೋದಿ ಸರಕಾರದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರದ ಅಡಿಪಾಯ ಭದ್ರವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News