ಪೊಲೀಸ್ ಕಾನ್‌ಸ್ಟೇಬಲ್‌ಗಳ ಎದೆಭಾಗಕ್ಕೆ ಎಸ್‌ಸಿ, ಎಸ್‌ಟಿ, ಒಬಿಸಿ ಗುರುತು: ತನಿಖೆಗೆ ಆದೇಶ

Update: 2018-04-29 17:39 GMT

 ಭೋಪಾಲ, ಎ.29: ನೂತನವಾಗಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಪೊಲೀಸ್ ಕಾನ್‌ಸ್ಟೇಬಲ್‌ಗಳ ವೈದ್ಯಕೀಯ ಪರೀಕ್ಷೆಯ ಸಂದರ್ಭ ಎದೆಭಾಗದಲ್ಲಿ ‘ಎಸ್‌ಸಿ, ಎಸ್‌ಟಿ, ಒಬಿಸಿ’ ಎಂದು ಗುರುತು ಮಾಡಲಾಗಿರುವ ಪ್ರಕರಣದ ಬಗ್ಗೆ ಮಧ್ಯಪ್ರದೇಶದ ಪೊಲೀಸ್ ಮುಖ್ಯಸ್ಥರು ತನಿಖೆಗೆ ಆದೇಶಿಸಿದ್ದಾರೆ.

 ಅಭ್ಯರ್ಥಿಗಳ ಎದೆಭಾಗದಲ್ಲಿ ಈ ರೀತಿ ಗುರುತಿಸಲು ಯಾವುದೇ ಸೂಚನೆ ನೀಡಲಾಗಿಲ್ಲ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಅಪರಾಧಿಗಳೆಂದು ಕಂಡುಬಂದವರನ್ನು ಶಿಕ್ಷಿಸಲಾಗುವುದು ಎಂದು ಧಾರ್ ಜಿಲ್ಲಾ ಪೊಲೀಸ್ ಅಧೀಕ್ಷಕ ಬೀರೇಂದರ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಘಟನೆಯ ಹಿಂದೆ ಯಾವುದೇ ದುರುದ್ದೇಶವಿಲ್ಲ. ಈ ವಿಭಾಗದವರಿಗೆ ದೈಹಿಕ ಮಾಪನದ ವಿಷಯದಲ್ಲಿ ಕೆಲವು ರಿಯಾಯಿತಿ ಇದೆ. ಆದ್ದರಿಂದ ಪಾರದರ್ಶಕತೆ ಕಾಯ್ದುಕೊಳ್ಳಲು ಹೀಗೆ ಮಾಡಲಾಗಿದೆ. ಇದೀಗ ಈ ಗುರುತನ್ನು ತೆಗೆದುಹಾಕಲು ಜಿಲ್ಲಾ ಪೊಲೀಸರಿಗೆ ಸೂಚಿಸಲಾಗಿದೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ರಿಷಿ ಕುಮಾರ್ ಶುಕ್ಲ ತಿಳಿಸಿದ್ದಾರೆ.

 ಆಯ್ಕೆ ಸಂದರ್ಭ ಈ ವಿಭಾಗದವರಿಗೆ ಕೆಲವೊಂದು ರಿಯಾಯ್ತಿ ನೀಡಲಾಗಿದ್ದು ಈ ಸೌಲಭ್ಯದಿಂದ ಯಾವುದೇ ಅಭ್ಯರ್ಥಿಗಳು ವಂಚಿತರಾಗಬಾರದು ಎಂದು ಹೀಗೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.

 ನಿಯಮದ ಪ್ರಕಾರ ಸಾಮಾನ್ಯ ವರ್ಗ, ಒಬಿಸಿ ಮತ್ತು ಎಸ್‌ಸಿ ವಿಭಾಗದ ಅಭ್ಯರ್ಥಿಗಳು 168 ಸೆ.ಮೀ. ಎತ್ತರವಿರಬೇಕು. ಎಸ್‌ಟಿ ಅಭ್ಯರ್ಥಿಗಳು 160 ಸೆ.ಮೀ. ಎತ್ತರ ಇರಬೇಕು. ಇದೇ ರೀತಿ ಎದೆಯ ಸುತ್ತಳತೆಯ ಮಾಪನದಲ್ಲೂ ಈ ವಿಭಾಗದ ಅಭ್ಯರ್ಥಿಗಳಿಗೆ ರಿಯಾಯಿತಿ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಬಗ್ಗೆ ಯಾವುದೇ ಅಭ್ಯರ್ಥಿ ದೂರು ದಾಖಲಿಸಿಲ್ಲ. ಸ್ಥಳೀಯ ಮಾಧ್ಯಮವೊಂದರಲ್ಲಿ ಪ್ರಸಾರವಾದ ವರದಿಯಲ್ಲಿ ಅಭ್ಯರ್ಥಿಗಳ ಎದೆಭಾಗದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಗುರುತು ಮಾಡಿರುವ ಚಿತ್ರ ಪ್ರಕಟವಾಗಿತ್ತು. ಬಳಿಕ ಈ ಬಗ್ಗೆ ವ್ಯಾಪಕ ಚರ್ಚೆ, ಟಿಪ್ಪಣಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News