×
Ad

ನಿಟ್ಟೆಯ ಅಣ್ಣ ತಂಗಿಯಿಂದ ಪಿಯುಸಿ ಪರೀಕ್ಷೆಯಲ್ಲಿ ‘ವಿಶೇಷ’ ಸಾಧನೆ

Update: 2018-04-30 19:56 IST

ಉಡುಪಿ, ಎ.30: ಸೊಂಟದ ಕೆಳಗೆ ಬಲ ಇಲ್ಲದೆ ತೆವಳಿಕೊಂಡೇ ಹೋಗುವ ವಿಶೇಷ ಮಕ್ಕಳಾದ ನಿಟ್ಟೆ ಗ್ರಾಮದ ಬರ್ಗಲ್‌ಗುಡ್ಡೆಯ ಅಣ್ಣ ತಂಗಿ ಇಬ್ಬರು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಬರ್ಗಲ್‌ಗುಡ್ಡೆಯ ಶೇಖರ್ ಸಾಲ್ಯಾನ್ ಹಾಗೂ ಜ್ಯೋತಿ ಸಾಲ್ಯಾನ್ ದಂಪತಿಯ ಪುತ್ರ ಪ್ರಜ್ವಲ್ (21) ಹಾಗೂ ಪುತ್ರಿ ಪ್ರತೀಕ್ಷಾ (19) ಎಂಬವರು ಕಲಾ ವಿಭಾಗದಲ್ಲಿ ಕ್ರಮವಾಗಿ 308 (ಶೇ.51) ಹಾಗೂ 294 (ಶೇ.49) ಅಂಕ ಗಳನ್ನು ಪಡೆದಿದ್ದಾರೆ.

ಕೈಕಾಲು ಬಲ ಇಲ್ಲದ ಕಾರಣ ನಡೆಯಲು ಸಾಧ್ಯವಾಗದೆ ಇವರು ಒಂದನೇ ತರಗತಿಯಿಂದ ಪಿಯುಸಿವರೆಗೂ ಮನೆಯಲ್ಲಿಯೇ ಉಪನ್ಯಾಸಕರನ್ನು ಕರೆಸಿ ಪಾಠ ಹೇಳಿಸಿ ಕೊಂಡಿದ್ದಾರೆ. ಸ್ವತಃ ಬರೆಯಲೂ ಸಾಧ್ಯವಿಲ್ಲದ ಅಣ್ಣ ತಂಗಿ ಸಹಾಯಕರ ನೆರವಿನಿಂದ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

ಪ್ರಜ್ವಲ್ ಕನ್ನಡದಲ್ಲಿ 40, ಇಂಗ್ಲಿಷ್‌ನಲ್ಲಿ 44, ಇತಿಹಾಸ 60, ಇಕಾನಮಿಕ್ಸ್ 50, ಸಮಾಜಶಾಸ್ತ್ರದಲ್ಲಿ 61, ರಾಜಶಾಸ್ತ್ರದಲ್ಲಿ 53 ಅಂಕಗಳನ್ನು ಗಳಿಸಿ ಎರಡನೆ ದರ್ಜೆಯಲ್ಲಿ ಮತ್ತು ಪ್ರತೀಕ್ಷಾ ಕನ್ನಡದಲ್ಲಿ 50, ಇಂಗ್ಲಿಷ್‌ನಲ್ಲಿ 46, ಇತಿಹಾಸ 61, ಇಕಾನಮಿಕ್ಸ್ 35, ಸಮಾಜಶಾಸ್ತ್ರದಲ್ಲಿ 50, ರಾಜಶಾಸ್ತ್ರದಲ್ಲಿ 52 ಅಂಕಗಳನ್ನು ಗಳಿಸಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಎಸೆಸೆಲ್ಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದು, ಪ್ರಜ್ವಲ್ ಶೇ.70 ಹಾಗೂ ಪ್ರಜ್ಞಾ ಶೇ.68 ಅಂಕಗಳನ್ನು ಗಳಿಸಿದ್ದರು.

ಪ್ರತಿದಿನ ಮನೆಯಲ್ಲೇ ಪಾಠ: ನಿಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥ ಮಿಕ ಶಾಲೆಯ ಅತಿಥಿ ಶಿಕ್ಷಕ, ನೆರೆಮನೆಯ ಗಣೇಶ್ ಹಾಗೂ ನೆರೆಮನೆಯ ರಜನಿ ಮತ್ತು ಅಕ್ಷತಾ ಇವರಿಗೆ ಪ್ರತಿದಿನ ಮನೆಗೆ ಬಂದು ಪಾಠ ಹೇಳಿಕೊಡುವ ಮೂಲಕ ಇವರ ಸಾಧನೆಗೆ ಕಾರಣೀಭೂತರಾಗಿದ್ದಾರೆ.

ಆರಂಭದಿಂದ ಕಳೆದ ಡಿಸೆಂಬರ್ ತಿಂಗಳವರೆಗೆ ರಜನಿ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ಇತಿಹಾಸ, ಕನ್ನಡ ಹಾಗೂ ಸಮಾಜಶಾಸ್ತ್ರ ಪಾಠವನ್ನು ಹೇಳಿಕೊಟ್ಟಿದ್ದರು. ಅವರ ನಂತರ ಅಕ್ಷತಾ ಅದನ್ನು ಮುಂದುವರೆಸಿದ್ದರು. ಸಂಜೆ 7ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಗಣೇಶ್ ಇಕಾನಮಿಕ್ಸ್, ಸಮಾಜಶಾಸ್ತ್ರ ಹಾಗೂ ಆಂಗ್ಲ ಭಾಷೆಯ ಪಾಠವನ್ನು ಮಾಡಿದ್ದರು.

ಕಾರ್ಕಳ ಬೋರ್ಡ್ ಹೈಸ್ಕೂಲ್ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾದ ಪ್ರತ್ಯೇಕ ಕೋಣೆಯಲ್ಲಿ ಇವರು ಪ್ರತ್ಯೇಕ ಪ್ರತ್ಯೇಕವಾಗಿ ಪರೀಕ್ಷೆ ಬರೆದಿದ್ದರು. ಸ್ವತಃ ತಮ್ಮ ಕೈಯಲ್ಲಿ ಬರೆಯಲು ಅಶಕ್ತರಾಗಿರುವ ಮಕ್ಕಳು ಸಹಾಯಕರ ಸಹಾಯದಿಂದ ಪರೀಕ್ಷೆ ಬರೆದಿದ್ದರು. ಈ ಬಗ್ಗೆ ನಿಗಾವಹಿಸಲು ವಿಶೇಷ ಪಡೆಯನ್ನು ಕೂಡ ನಿಯೋಜಿಸಲಾಗಿತ್ತು. ಸಾಮಾನ್ಯರಿಗೆ ಪರೀಕ್ಷೆ ಬರೆಯಲು 2.30ಗಂಟೆ ಕಾಲಾ ವಧಿ ನೀಡಿದ್ದರೆ ಇವರಿಗೆ ಹೆಚ್ಚುವರಿಯಾಗಿ ಒಂದು ಗಂಟೆ ನೀಡಲಾಗಿತ್ತು.

ಪರೀಕ್ಷೆ ಬರೆಯಲು ತೊಡಕು: ಎಸೆಸೆಲ್ಸಿಯಲ್ಲಿ ಇವರಿಗೆ ಪಾಠ ಹೇಳಿದ ಶಿಕ್ಷಕರೇ ಸಹಾಯಕರಾಗಿ ಪರೀಕ್ಷೆ ಬರೆದಿದ್ದರು. ಇದರಿಂದ ಇವರು ಯಾವುದೇ ಸಂಕೋಚ ಇಲ್ಲದೆ ನಿರ್ಗಳವಾಗಿ ಉತ್ತರ ಹೇಳಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ಹೊರಗಿನವರೊಂದಿಗೆ ಹೆಚ್ಚಾಗಿ ಬೆರೆಯದಿರುವುದೇ ಇವರಿಗೆ ಈ ಬಾರಿಯ ಪಿಯುಸಿ ಪರೀಕ್ಷೆ ಬರೆಯಲು ದೊಡ್ಡ ತೊಡಕಾಗಿ ಕಾಡಿತ್ತು.

ಪಾಠ ಹೇಳಿಕೊಟ್ಟ ಶಿಕ್ಷಕರು ಪರೀಕ್ಷೆಯಲ್ಲಿ ಸಹಾಯಕರಾಗಬಾರದೆಂಬ ಇಲಾಖೆಯ ಕಾನೂನು ಇವರಿಗೆ ಸಮಸ್ಯೆಯಾಗಿ ಪರಿಣಮಿಸಿತು. ಹೊಸಬರ ಜೊತೆಗೆ ತುಟಿ ಬಿಚ್ಚದ ಈ ಹುಡುಗರಿಗೆ ಹೊಸ ಸಹಾಯಕರನ್ನು ಹುಡುಕುವ ಸವಾಲು ಮನೆಯವರು ಹಾಗೂ ಶಿಕ್ಷಕರಿಗೆ ಎದುರಾಗಿತ್ತು. ಹಲವು ಕಡೆ ಅಲೆ ದಾಟದ ಬಳಿಕ ಕೊನೆಗೆ ನೆರಮನೆಯ ಮತ್ತು ಕಲ್ಯದ ವಿದ್ಯಾರ್ಥಿಗಳಿಬ್ಬರು ಸಹಾಯಕ್ಕೆ ಬಂದು ಪರೀಕ್ಷೆ ಬರೆದುಕೊಟ್ಟಿದ್ದರು.

ಪರೀಕ್ಷೆಗಿಂತ ವಾರದ ಹಿಂದೆ ಇಬ್ಬರೂ ಒಂದೊಂದು ಗಂಟೆ ಪ್ರಜ್ವಲ್ ಮತ್ತು ಪ್ರತೀಕ್ಷಾರ ಮನೆಗೆ ಬಂದು ಅವರ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಸರಿಯಾಗಿ ಮಾತನಾಡುವ ಪ್ರತೀಕ್ಷಾ ಹೊರಗಿನವರ ಎದುರು ಸಂಕೋಚ ಪಡುತ್ತಾಳೆ. ಪ್ರಜ್ವಲ್ ಪ್ರತಿ ಮಾತಿಗೂ ತೊದಲುವ ಸಮಸ್ಯೆ ಹೊಂದಿದ್ದಾನೆ.

ಶಿಕ್ಷಣಕ್ಕೆ ದಾನಿಗಳ ನೆರವು
ಎಸೆಸ್ಸೆಲ್ಸಿ ನಂತರ ಇವರ ಪದವಿ ಪೂರ್ವ ಶಿಕ್ಷಣ ಕಲಿಕೆಗೆ ಆರ್ಥಿಕ ಅಡಚಣೆ ಎದುರಾದಾಗ ಉಡುಪಿ ಎಂಜಿಎಂ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಕಾಮತ್ ಈ ಮಕ್ಕಳ ಕುರಿತು ಸಾಕ್ಷ್ಯಚಿತ್ರ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ಮೂಲಕ ಆ ಕುಟುಂಬಕ್ಕೆ ಸುಮಾರು 11 ಲಕ್ಷ ರೂ. ನೆರವು ಹರಿದುಬಂತು.

ಇಂತಹ ಮಕ್ಕಳು ಈ ರೀತಿಯ ಸಾಧನೆ ಮಾಡಲು ಪೋಷಕರ ಬೆಂಬಲ ಹಾಗೂ ಅವರ ಆಸಕ್ತಿಯಿಂದ ಮಾತ್ರ ಸಾಧ್ಯ. ಪಿಯುಸಿ ಶಿಕ್ಷಣ ಪಡೆಯಲು ಮಕ್ಕಳು ತುಂಬಾ ಕಷ್ಟ ಪಟ್ಟಿದ್ದಾರೆ. ಮುಂದೆ ಕಂಪ್ಯೂಟರ್ ಶಿಕ್ಷಣ ಪಡೆಯುವ ಇರಾದೆಯನ್ನು ಅವರು ಹೊಂದಿದ್ದಾರೆ. ಐಎಎಸ್ ಪರೀಕ್ಷೆ ಬರೆಯಬೇಕೆಂಬ ಮಹಾದಾಸೆ ಇದ್ದರೂ ಪದವಿ ಶಿಕ್ಷಣ ಪೂರೈಸಲು ಇವರಿಗೆ ಕಷ್ಟಸಾಧ್ಯ.
-ಗಣೇಶ್ ನಿಟ್ಟೆ, ಶಿಕ್ಷಕ

ಮಕ್ಕಳ ಈ ಸಾಧನೆ ರ್ಯಾಂಕ್‌ಗಿಂತ ದೊಡ್ಡದು. ಈ ಪರಿಸ್ಥಿತಿಯಲ್ಲೂ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಲು ಮಕ್ಕಳಿಬ್ಬರೂ ತುಂಬಾ ಕಷ್ಟ ಅನುಭವಿಸಿದ್ದಾರೆ. ಪರೀಕ್ಷೆ ಬರೆಯಲು ಹೋಗಿ ಬರಲು ಕೂಡ ತುಂಬಾ ತೊಂದರೆ ಅನುಭವಿಸಿದ್ದಾರೆ. ಎಲ್ಲವನ್ನು ಮೆಟ್ಟಿನಿಂತು ಈ ಸಾಧನೆ ಮಾಡಿರುವುದು ಸಂತೋಷ ಆಗುತ್ತಿದೆ.

-ಜ್ಯೋತಿ ಸಾಲ್ಯಾನ್, ತಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News