ಪುತ್ತೂರು ಜೆಡಿಎಸ್ ಅಧ್ಯಕ್ಷರಾಗಿ ಅಶ್ರಫ್ ಕಲ್ಲೇಗ
ಪುತ್ತೂರು, ಎ. 30: ಜಾತ್ಯಾತೀತ ಜನತಾದಳ (ಜೆಡಿಎಸ್) ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಅಶ್ರಫ್ ಕಲ್ಲೇಗ ಅವರು ನೇಮಕಗೊಂಡಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಐ.ಸಿ. ಕೈಲಾಸ್ ಅವರು ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಾರಣ ಅವರ ಸ್ಥಾನಕ್ಕೆ ಜೆಡಿಎಸ್ ಸಂಘಟನಾ ಕಾರ್ಯದರ್ಶಿಯಾಗಿರುವ ಅಶ್ರಫ್ ಕಲ್ಲೇಗ ಅವರನ್ನು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಹಾಗೂ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಅವರ ಆದೇಶದಂತೆ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ ಅವರು ನೇಮಕಗೊಳಿಸಿ ಆದೇಶಿಸಿದ್ದಾರೆ.
ತಾಲೂಕು ಯುವ ಜೆಡಿಎಸ್ ಅಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿ. ರಾಜ್ಯ ಕಾರ್ಯದರ್ಶಿಯಾಗಿ, ಪುರಸಭೆಯ ನಾಮನಿರ್ದೇಶಿತ ಸದಸ್ಯರಾಗಿ, ದ.ಕ ಮತ್ತು ಉಡುಪಿ ಜಮೀಯತ್ತುಲ್ ಫಲಾಹ್ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅಶ್ರಫ್ ಕಲ್ಲೇಗ ಅವರು ಪ್ರಸ್ತುತ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಪುತ್ತೂರು ಕೃಷಿ ಉತ್ಪನ್ನ ಸಹಕಾರಿ ಮಂಡಳಿಯ ನಿರ್ದೇಶಕರಾಗಿ, ದ.ಕ. ಸಹಕಾರಿ ಮಂಡಳಿಯ ನಿರ್ದೇಶಕರಾಗಿ ಮತ್ತು ರಾಜ್ಯ ಮುಸ್ಲಿಂ ಯುವಜನ ಪರಿಷತ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.