ಟಿಎಂಎ ಪೈ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ: ಜಿ.ಶಂಕರ್
ಮಣಿಪಾಲ, ಎ.30: ಡಾ.ಟಿ.ಎಂ.ಎ.ಪೈ ಸಾಧಿಸದ ಕ್ಷೇತ್ರಗಳಿಲ್ಲ. ಶಿಕ್ಷಣ, ಬ್ಯಾಂಕಿಂಗ್, ಆರೋಗ್ಯ, ಔದ್ಯೋಗಿಕ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆ ಮಾಡಿದ ಸಾಧಕ ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲ್ ಟ್ರಸ್ಟ್‌ನ ಅಧ್ಯಕ್ಷ ಜಿ.ಶಂಕರ್ ಹೇಳಿದ್ದಾರೆ.
ಮಣಿಪಾಲ ಅಕಾಡಮಿ ಆಫ್ ಹೈಯರ್ ಏಜ್ಯುಕೇಶನ್ ವತಿಯಿಂದ ಡಾ. ಟಿ.ಎಂ.ಎ.ಪೈ ಅವರ 120ನೆ ಜನ್ಮದಿನಾಚರಣೆಯ ಪ್ರಯುಕ್ತ ಮಣಿಪಾಲ ವ್ಯಾಲಿವ್ಯೆ ಹೊಟೇಲಿನ ಚೈತ್ಯಾ ಹಾಲ್‌ನಲ್ಲಿ ಸೋಮವಾರ ಆಯೋಜಿಸಲಾದ ಸ್ಥಾಪಕರ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.
ಬಡತನದಲ್ಲಿ ಹುಟ್ಟಿ ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದ ಡಾ.ಟಿ. ಎಂ.ಎ.ಪೈ ಕಠಿಣ ಪರಿಶ್ರಮ, ಸಂಕಲ್ಪದಿಂದ ಮಾತ್ರ ಬದಲಾವಣೆ ತರಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಮಾಹೆಯ ಪ್ರಥಮ ಮಹಿಳೆ ವಸಂತಿ ಆರ್.ಪೈ ವಹಿಸಿದ್ದರು. ವೇದಿಕೆಯಲ್ಲಿ ಮಣಿಪಾಲ ಫೈನಾನ್ಸ್ ಕಾರ್ಪೊರೇಶನ್‌ನ ಆಡಳಿತ ನಿರ್ದೇಶಕ ಟಿ.ನಾರಾಯಣ್ ಪೈ, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗ್ರೂಪ್‌ನ ಅಧ್ಯಕ್ಷ ಡಾ.ರಂಜನ್ ಆರ್.ಪೈ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಉಪಸ್ಥಿತರಿದ್ದರು.
ಮಾಹೆಯ ಉಪಕುಲಪತಿ ಡಾ.ಎಚ್.ವಿನೋದ್ ಭಟ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಂದಿಸಿದರು. ಪ್ರೊ.ಡಾ.ಅನಿಲ್ ಭಟ್ ಕಾರ್ಯಕ್ರಮ ನಿರೂಪಿಸಿದರು.