ಅಕ್ರಮ ವಾಸ್ತವ್ಯ: ನೈಜಿರಿಯಾ ವಿದ್ಯಾರ್ಥಿನಿಯ ಬಂಧನ
ಮಣಿಪಾಲ, ಎ.30: ವೀಸಾ ಅವಧಿ ಮುಗಿದ ನಂತರವೂ ಎರಡೂವರೆ ವರ್ಷಗಳ ಕಾಲ ಭಾರತದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ನೈಜೀರಿಯಾ ದೇಶದ ವಿದ್ಯಾರ್ಥಿನಿಯೊಬ್ಬಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ವಿದ್ಯಾಭ್ಯಾಸ ಮಾಡುತ್ತಿದ್ದ ನೈಜಿರಿಯಾ ದೇಶದ ಪ್ರಜೆ ಉಯು ಎನ್‌ಸಾ ಜೆರ್ರಿ ಡೇವಿಸ್ (27) ಎಂಬಾಕೆ ಬಂಧಿತ ಆರೋಪಿ. ಈಕೆಯ ವೀಸಾ ಅವಧಿ 2015ರ ಡಿ.27ಕ್ಕೆ ಮುಕ್ತಾಯವಾಗಿದ್ದು, ಅದರ ನಂತರ ಆಕೆ ವೀಸಾ ಮತ್ತು ವಾಸ್ತವ್ಯದ ನೊಂದಾವಣೆ ಪತ್ರ ಇಲ್ಲದೆ ಭಾರತದಲ್ಲಿ ಅನಧಿಕೃತವಾಗಿ ವಾಸ್ತವ್ಯ ಹೂಡಿ ಪಾಸ್‌ಪೋರ್ಟ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಳೆನ್ನಲಾಗಿದೆ.
ಎರಡೂವರೆ ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ವಾಸವಾಗಿ ತಲೆ ಮರೆಸಿಕೊಂಡಿದ್ದ ಈಕೆ, ಅಹಮದಬಾದ್ ಮೂಲಕ ತನ್ನ ದೇಶಕ್ಕೆ ತೆರಳಲು ಯತ್ನಿಸುತ್ತಿದ್ದಳು. ಈ ಬಗ್ಗೆ ಅಹಮದಬಾದ್ ಪೊಲೀಸರು ನೀಡಿದ ಮಾಹಿತಿ ಯಂತೆ ಮಣಿಪಾಲ ಪೊಲೀಸರು ಅಹಮದಬಾದ್‌ಗೆ ತೆರಳಿ ಆಕೆಯನ್ನು ಬಂಧಿಸಿ ಇಂದು ಉಡುಪಿಗೆ ಕರೆದುಕೊಂಡು ಬಂದಿದ್ದಾರೆ.
ಇಂದು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.