×
Ad

ಜನಾರ್ದನ ಪೂಜಾರಿಗೆ ಹರಿಕೃಷ್ಣ ಬಂಟ್ವಾಳ ಮಾನಸಿಕ ಹಿಂಸೆ ನೀಡುತ್ತಿದ್ದಾರೆ: ಬೇಬಿ ಕುಂದರ್ ಆರೋಪ

Update: 2018-04-30 22:52 IST

ಬಂಟ್ವಾಳ, ಎ. 30: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರಿಗೆ ಹರಿಕೃಷ್ಣ ಬಂಟ್ವಾಳ ಅವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬೇಬಿ ಕುಂದರ್ ಆರೋಪಿಸಿದ್ದಾರೆ.

ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂಜಾರಿ ಅವರ ಬಗ್ಗೆ ಕೀಳಾಗಿ ಮಾತನಾಡುವ ಹರಿಕೃಷ್ಣ ಬಂಟ್ವಾಳ್ ಅವರ ವ್ಯಕ್ತಿತ್ವಕ್ಕೆ ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಈ ಹಿಂದೆಯೂ ಹಲವು ಬಾರಿ ಪೂಜಾರಿ ಅವರ ಹೆಸರನ್ನು ಹರಿಕೃಷ್ಣ ಬಂಟ್ವಾಳ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದೀಗ ಮತ್ತೆ ಚುನಾವಣೆಯ ಅಮಲಿನಲ್ಲಿ ಪೂಜಾರಿ ಅವರು ಹೆಸರೆತ್ತಿ ಬಿಲ್ಲವ ಸಮುದಾಯವನ್ನು ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಪೂಜಾರಿ ಅವರ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ ಎಂದು ದೂರಿದರು.

ಬಿಜೆಪಿಯ ಜಾತಿ, ಧರ್ಮದ ಅಮಲಿಗೆ ಬಿಲ್ಲವ ಯುವಕರು ಜೈಲುಪಾಲಾಗುತ್ತಿದ್ದಾರೆ. ಇದರಿಂದ ಬಿಲ್ಲವರು ಹೊರಬಂದು ನಾರಾಯಣಗುರುಗಳ ತತ್ವದಂತೆ ಬದುಕಬೇಕು ಎಂದು ಸಲಹೆ ನೀಡಿದರು.

ಹರಿಕೃಷ್ಣ ಬಂಟ್ವಾಳ್ ಕಾಂಗ್ರೆಸ್‌ನಲ್ಲು ಪಕ್ಷ ಅಥವಾ ಸಮಾಜದ ಬೆಳವಣಿಗೆಗೆ ಕಿಂಚಿತ್ತೂ ಸೇವೆ ಮಾಡಿದವರಲ್ಲ. ಪಕ್ಷ ವಿರೋಧಿ ಚಟುವಟಿಕೆಗಳಿಂದ ತಿರಸ್ಕರಿ ಸಲ್ಪಟ್ಟ ಹರಿಕೃಷ್ಣರು, ಇದೀಗ ರಮಾನಾಥ ರೈ ಅವರ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಂಜೀವ ಪೂಜಾರಿ ಬೊಳ್ಳಾಯಿ, ಮಾಯಿಲಪ್ಪ ಸಾಲಿಯಾನ್, ಪರಮೇಶ್ವರ್ ಮೂಲ್ಯ, ಮಧುಸೂದನ್, ಜಯಂತಿ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News