×
Ad

“ಭರವಸೆ ಈಡೇರಿಸದ ಸರ್ಕಾರಗಳನ್ನು ಪ್ರಶ್ನಿಸಿ” ಮತದಾರರಿಗೆ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಕರೆ

Update: 2018-04-30 23:04 IST

ಮಂಗಳೂರು, ಎ. 30: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ದೇಶದ ಮಟ್ಟಿಗೆ ನಿರ್ಣಾಯಕ ಚುನಾವಣೆ. ಆದ್ದರಿಂದ ಈ ಚುನಾವಣೆಯ ಫಲಿತಾಂಶಕ್ಕೆ ಹೆಚ್ಚು ಮಹತ್ವವಿದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಶಿಕ್ಷಣ, ದುಡಿಮೆ, ಪ್ರಜ್ಞಾವಂತಿಕೆ, ಸಂಸ್ಕೃತಿ ಹೀಗೆ ಹಲವು ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ವಿಶಿಷ್ಟವಾಗಿದೆ. ಆದ್ದರಿಂದ ಈ ಕ್ಷೇತ್ರದ ಪ್ರಜ್ಞಾವಂತ ಮತದಾರರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ಸಮರ್ಥ ಅಭ್ಯರ್ಥಿಯನ್ನೇ ಆರಿಸುತ್ತಾರೆ ಎಂದು ಭಾವಿಸಿದ್ದೇನೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಕಾಂ.ಎಸ್.ವರಲಕ್ಷ್ಮಿ ಭರವಸೆ ವ್ಯಕ್ತಪಡಿಸಿದರು.

ಅವರು ಸೋಮವಾರ ಸಂಜೆ ಕಾವೂರಿನಲ್ಲಿ ನಡೆದ ಸಿಪಿಐಎಂ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಸಿಪಿಐಎಂ ಅಭ್ಯರ್ಥಿ ಯಾಗಿ ಜನಪರ ಹೋರಾಟಗಾರ ಮುನೀರ್ ಕಾಟಿಪಳ್ಳ ಚುನಾವಣೆ ಸ್ಪರ್ಧಿಸುತ್ತಿದ್ದು, ಈ ನಿಮಿತ್ತ ಇಂದು ಕಾವೂರು ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

“ಕಳೆದ ಬಾರಿ ಲೋಕಸಭೆಯಲ್ಲಿ ಜಯಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ತಾನು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ನಾನು ಒಬ್ಬ ಮತದಾರಳಾಗಿ, ಈ ದೇಶದ ಪ್ರಜೆಯಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತೇನೆ. ನೀವು ಕೂಡಾ ಅವರನ್ನು ಪ್ರಶ್ನಿಸಬೇಕು” ಎಂದು ಕರೆ ನೀಡಿದ ಅವರು, ನೋ”ಟು ಅಮಾನ್ಯೀಕರಣ ಮೊದಲಾದ ಕೇಂದ್ರ ಸರ್ಕಾರದ ನೀತಿಗಳಿಂದ ಜನರು ಅನುಭವಿಸಿದ ಸಮಸ್ಯೆ ಒಂದೆರಡಲ್ಲ.  ಆಸ್ಪತ್ರೆಯಲ್ಲಿ ಹೆಣ ಬಿಡಿಸಿಕೊಳ್ಳಲು ಜನ ಪರದಾಡಬೇಕಾಯಿತು. ಸರತಿ ಸಾಲಿನಲ್ಲಿ ನಿಂತ ಜನರು ಜೀವತೆತ್ತರು. ಇದಕ್ಕೆಲ್ಲ ಯಾರು ಹೊಣೆ?” ಎಂದು ಪ್ರಶ್ನಿಸಿದರು.

“ಎರಡು ಕೋಟಿ ಉದ್ಯೋಗ ಸೃಷ್ಟಿಯ ಬಗ್ಗೆ ನೀವು ಮಾತಾಡಿದ್ದಿರಿ. ಉದ್ಯೋಗ ಸ್ವಾಭಿಮಾನದ ಬದುಕನ್ನು ನಡೆಸಲು ಬೇಕಾದ ನಿಶ್ಚಿತ ಆದಾಯದ ದುಡಿಮೆ. ಆದರೆ ಬಿಜೆಪಿ ಪಕೋಡಾ ಮಾರುವುದು ಕೂಡಾ ಉದ್ಯೋಗ ಅನ್ನುತ್ತದೆ. ಸುರಕ್ಷತೆಯೇ ಇಲ್ಲದ, ಭದ್ರತೆ ಇಲ್ಲದ ಕೆಲಸವನ್ನು ಮಾಡಿ ಅನ್ನುತ್ತಿದ್ದಾರೆ. ಅದನ್ನು ಉದ್ಯೋಗ ಎಂದು ಕರೆಯಲಾಗುತ್ತದೆಯೇ? ಬದುಕಿಗೆ ಆಸರೆಯಾಗುವಂಥದ್ದು ಉದ್ಯೋಗ. ಕೃಷಿ, ಕಾರ್ಖಾನೆ, ಸೇವಾ ಕ್ಷೇತ್ರಗಳಲ್ಲಿ ಈ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಕ್ಷೇತ್ರಗಳ ಅಭಿವೃದ್ಧಿಗೆ ಗಮನ ಹರಿಸುವುದನ್ನು ಬಿಟ್ಟು ಪ್ರಧಾನಿಗಳು ಪಕೋಡಾ ಮಾರಿ ಅನ್ನುತ್ತಾರೆ” ಎಂದು ಅವರು ಕಿಡಿ ಕಾರಿದರು.

ಕೃಷಿ ಕ್ಷೇತ್ರವು ದೊಡ್ಡ ಪ್ರಮಾಣದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೃಷಿ ಕೂಲಿಕಾರರು ವಲಸೆ ಹೋಗುತ್ತಿದ್ದಾರೆ. ನಿಮ್ಮದೇ ದಕ್ಷಿಣ ಕನ್ನಡದಲ್ಲಿ ಯುವಕರು ಊರು ತೊರೆದು ದುಬೈ, ಮುಂಬಯಿ ಎಂದು ವಲಸೆ ಹೋಗುತ್ತಿದ್ದಾರೆ. ಕೃಷ್ಇ ಕ್ಷೇತ್ರವನ್ನು ವ್ಯವಸ್ಥಿತಗೊಳಿಸಲು ಪ್ರಯತ್ನ ಮಾಡದೆ ಇರುವುದೇ ಇದಕ್ಕೆ ಕಾರಣ. ಹಾಗೆಯೇ ಕೈಗಾರಿಕೆಗಳ ಕಾರ್ಮಿಕರು ಉದಾರೀಕರಣ ನೀತಿಯಿಂದಾಗಿ ಸಂಕಷ್ಟದಲ್ಲಿದ್ದಾರೆ. ಅಲ್ಲಿ ಹೊಸ ಉದ್ಯೋಗಗಳ ಸೃಷ್ಟಿಯಾಗುತ್ತಲೇ ಇಲ್ಲ. ಸೇವಾ ಕ್ಷೇತ್ರಗಳ ಖಾಸಗೀಕರಣವು ಕೂಡಾ ಉದ್ಯೋಗಸೃಷ್ಟಿಯನ್ನು ಕುಂಠಿತಗೊಳಿಸುತ್ತಿದೆ. ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ” ಎಂದು ಅವರು ಆರೋಪಿಸಿದರು.

“ಕೇಂದ್ರ ಸರ್ಕಾರವು ಒಂದು ದೇಶ, ಒಂದು ಭಾಷೆ, ಒಂದು ತೆರಿಗೆ ಇತ್ಯಾದಿ ಮಾತನಾಡುತ್ತಾ ಏಕಸಂಸ್ಕೃತಿಯನ್ನು ಹೇರುವ ಹುನ್ನಾರ ನಡೆಸುತ್ತಿದೆ. ಸಾಂಸ್ಕೃತಿಕ ವೈವಿಧ್ಯತೆಯ ಕನ್ನಡಿಗರು ಅದಕ್ಕೆ ಅವಕಾಶ ಕೊಡಬಾರದು. ಕೋಮುವಾದದ ಮೂಲಕ ಜನತೆಯನ್ನು ಒಡೆಯುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಎಲ್ಲ ಧರ್ಮಗಳ ಮನುಷ್ಯ ಹುಟ್ಟುವುದೂ ಒಂದೇ ಬಗೆಯಲ್ಲಿ. ಸಾಯುವುದೂ ಒಂದೇ ಬಗೆಯಲ್ಲಿ. ಅಲ್ಲಿ ಬದಲಾವಣೆ ಇಲ್ಲದ ಮೇಲೆ ಧರ್ಮದ ಹೆಸರಲ್ಲಿ ಮನುಷ್ಯರನ್ನು ಪ್ರತ್ಯೇಕಗೊಳಿಸುವುದೇಕೆ? ನಾವು ಇದನ್ನು ಪ್ರಶ್ನಿಸಬೇಕು” ಎಂದು ಅವರು ಕರೆ ನೀಡಿದರು.

“ದೇಶದ 21 ಕಡೆ ಬಿಜೆಪಿ ಮತ್ತು ಬಿಜೆಪಿ ಮಿತ್ರ ಪಕ್ಷಗಳು ಆಡಳಿತ ನಡೆಸುತ್ತಿದ್ದು, ಅವರಲ್ಲಿ 15 ಮುಖ್ಯಮಂತರಿಗಳು ಲಕ್ಷ ಕೋಟ್ಯಾಧಿಶ್ವರರಾಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಇದನ್ನು ನಾವು ಪ್ರಶ್ನೆ ಮಾಡಬೇಕು. ಭ್ರಷ್ಟಾಚಾರದ ವಿರುದ್ಧ ಸಮರ, ಕಪ್ಪುಹಣ ಎಂದೆಲ್ಲ ಜನರನ್ನು ಮರಳುಗೊಳಿಸಿದ ಬಿಜೆಪಿ ಸ್ವತಃ ಭ್ರಷ್ಟಾಚಾರದ ಹಣವನ್ನು ಇರಿಸಿಕೊಂಡಿದೆ” ಎಂದು ವರಲಕ್ಷ್ಮಿ ದೂರಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತ, “ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯನವರು ಮಾಡುತ್ತಿರುವುದೇನು? ಭ್ರಷ್ಟಾಚಾರಿ ರೆಡ್ಡಿ ಸಹೋದರರ ಮುಂದೆ ತೊಡೆ ತಟ್ಟಿದ್ದ ಸಿದ್ದರಾಮಯ್ಯ ಪಾದಯಾತ್ರೆ ನಡೆಸಿ ಜನರ ಮನ ಗೆದ್ದು ಮುಖ್ಯಮಂತ್ರಿಯಾದರು. ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ರಾಜ್ಯದ ಜನಸಾಮಾನ್ಯರ ಸ್ವಾಭಿಮಾನದ ಬದುಕನ್ನು ಉಳಿಸಲು ಯೋಜನೆಗಳನ್ನು ರೂಪಿಸುತ್ತಾರೆ ಎಂದು ನಾವು ಕಾದೆವು. ಆದರೆ ಅವರು ನಾಲ್ಕು ಬಾರಿ ಬಜೆಟ್ ಮಂಡಿಸಿದರೂ ಅವೆಲ್ಲವೂ ಜನಪ್ರಿಯ ಬಜೆಟ್ ಆಗಿದ್ದವೇ ವಿನಃ ಜನಪರ ಬಜೆಟ್ ಆಗಿರಲಿಲ್ಲ. ಅನ್ನಭಾಗ್ಯ ಯೋಜನೆ ರೂಪಿಸಿ, 1 ರುಪಾಯಿಗೆ 1 ಕೆಜಿಯಂತೆ ತಿಂಗಳಿಗೆ 30 ಕೆಜಿ ಅಕ್ಕಿ ಕೊಡುತ್ತೇವೆ ಅಂದರು. ನಂತರದಲ್ಲಿ, ಇದಕ್ಕೆ ಬಜೆಟ್ ಸಾಕಾಗುವುದಿಲ್ಲ, ಒಬ್ಬ ಮನುಷ್ಯನಿಗೆ ತಿಂಗಳಿಗೆ 7 ಕೆಜಿ ಅಕ್ಕಿ ಸಾಕು, ಅಷ್ಟನ್ನು ಕೊಡುತ್ತೇವೆ ಎಂದು ಯೋಜನೆಯ ವ್ಯಾಪ್ತಿಯನ್ನು ಕುಗ್ಗಿಸಿದರು. ಇದು ಅವರ ಜನಪರತೆ” ಎಂದು ಹೇಳಿದರು.

“ಜಾತಿಗೊಂದು ಭಾಗ್ಯ ಕೊಟ್ಟಿದ್ದೂ ಇದೇ ಸಿದ್ದರಾಮಯ್ಯನವರೇ. ಸಮುದಾಯಗಳು ತಮ್ಮ ಬದುಕನ್ನು ಸ್ವತಂತ್ರವಾಗಿ ನಡೆಸುವುದಕ್ಕೆ ನಿಗಮಗಳನ್ನು ಸ್ಥಾಪಿಸುವ ಅಗತ್ಯವಿದೆಯೇ ? ಇದರಿಂದ ಸಮುದಾಐಗಳು ಉದ್ದಾರವಾಗುತ್ತದೆಯೇ ? ಇದು ಓಲೈಕೆ ರಾಜಕಾರಣವಷ್ಟೆ” ಎಂದು ಆರೋಪಿಸಿದ ವರಲಕ್ಷ್ಮಿ, “ಸಮುದಾಯಗಳು ಸ್ವಾಭಿಮಾಣದ ಬದುಕನ್ನು ಕಟ್ಟಿಕೊಳ್ಳಲು ಯೋಜನೆ ರೂಪಿಸುವಲ್ಲಿ ಸರ್ಕಾರ ಎಡವಿದೆ” ಎಂದು ಆರೋಪಿಸಿದರು.

“ದಕ್ಷಿಣ ಕನ್ನಡದಲ್ಲಿ ಹಿಂದೂ ಮುಸ್ಲಿಮ್ ಗಲಭೆಗಳು ತಾರಕಕ್ಕೆ ಏರಿ, ಕ್ರಿಮಿನಲ್ ಕೇಸ್ ಗಳು ಆದಾಗಲೂ ತಪ್ಪಿತಸ್ಥರನ್ನು ಜೈಲಿಗೆ ಹಾಕದೆ ರಸ್ತೆಯಲ್ಲಿ ತಿರುಗಾಡಲು ಬಿಡಲಾಗಿದೆ. ಈ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡದೆ ಕುಳಿತಿರುವುದು ಏಕೆಂದು ಅರ್ಥವಾಗುತ್ತಿಲ್ಲ” ಎಂದು ಅವರು ಹೇಳಿದರು.

“ಕಾಂಗ್ರೆಸ್, ಬಿಜೆಪಿಯವರು ನಾವು ದುಡ್ಡು ಕೊಡದೆ ಜನ ವೋಟ್ ಹಾಕುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಎಲ್ಲವೂ ಇಲ್ಲಿ ಮುಕ್ತವಾಗಿಯೇ ನಡೆಯುತ್ತಿದೆ. ಅದರಿಂದಾಗಿಯೇ ನಾವು ಇಂದು ಈ ಸ್ಥಿತಿಯಲ್ಲಿದ್ದೇವೆ. ನಮಗೆ ನಿಜಕ್ಕೂ ಬದಲಾವಣೆ ಬೇಕು ಅಂದರೆ ನಮ್ಮ ಮತದಾನದ ಹಕ್ಕನ್ನು ಸಮರ್ಪಕವಾಗಿ ಚಲಾಯಿಸಬೇಕು. ದಕ್ಷಿಣ ಕನ್ನಡದಲ್ಲಿ ನಾಲ್ವರು ಯುವಕರು ಚುನಾವಣೆಗೆ ನಿಂತಿದ್ದಾರೆ. ಹೋರಾಟದ ಹಿನ್ನೆಲೆಯ ಇವರು ಹಣದ ರಾಜಕಾರಣ ಮಾಡುವವರಲ್ಲ. ಸಿಪಿಐಎಮ್ ನದ್ದು ಅನ್ಯಾಯದ ವಿರುದ್ಧ ನಡೆಸುವ ರಾಜಕಾರಣ. ನ್ಯಾಯವನ್ನು ಗೆಲ್ಲಿಸಬೇಕು ಅಂದಾಗ ಸಾಮಾನ್ಯವಾಗಿ ಬಂಬಲ ಕಡಿಮೆ. ಆದರೆ, ಒಮ್ಮೆ ನ್ಯಾಯ ಗೆದ್ದುಬಿಟ್ಡರೆ ಮತ್ತೆ ಅದಕ್ಕೆ ಸೋಲೇ ಇಲ್ಲ. ಆದ್ದರಿಂದ ನೀವು ನ್ಯಾಯುತವಾಗಿ ಕೆಲಸ ಮಾಡುವ ಈ ಕ್ಷೇತ್ರದ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಅವರಿಗೆ ಮತ ನೀಡಬೇಕೆಂದು ಕೋರುತ್ತೇನೆ” ಎಂದು ವರಲಕ್ಷ್ಮಿಯವರು ವಿನಂತಿ ಮಾಡಿದರು.

ವೇದಿಕೆಯಲ್ಲಿ ಅಭ್ಯರ್ಥಿ ಮುನೀರ್ ಕಾಟಿಪಳ್ಳ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಮನಪಾ ಸದಸ್ಯ ದಯಾನಂದ ಶೆಟ್ಟಿ, ಬಿ.ಕೆ.ಇಮ್ತಿಯಾಜ್, ಯು.ಬಿ.ಲೋಕಯ್ಯ, ನವೀನ್ ಕೊಂಚಾಡಿ, ಬಾವಾ ಪದರಂಗಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News