ಬಿಜೆಪಿಯಿಂದ ಹಿಂದೂಗಳಿಗೆ ಅನ್ಯಾಯ: ಸುನೀಲ್ ಕುಮಾರ್ ಬಜಾಲ್
ಮಂಗಳೂರು, ಎ.30: ಬಿಜೆಪಿಯಿಂದ ಹೆಚ್ಚು ಅನ್ಯಾಯಕ್ಕೊಳಗಾದವರು ಹಿಂದೂಗಳೇ ಆಗಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.
ಜಪ್ಪಿನಮೊಗರಿನಲ್ಲಿ ನಡೆದ ಪ್ರಚಾರ ಸಮಿತಿಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿ.ಜೆ.ಪಿ ಪಕ್ಷ ಧರ್ಮ ಧರ್ಮದೊಳಗಡೆ ಗಲಾಟೆ ಹುಟ್ಟಿಸಿ ಅಮಾಯಕ ಯುವಕರನ್ನು ಬಲಿ ಪಶುಗಳನ್ನಾಗಿಸಿ, ಅಲ್ಪ ಸಂಖ್ಯಾತರ ಮೇಲೆ ದಾಳಿ ನಡೆಸಿ ಹಿಂದುಳಿದ ಯುವಕರನ್ನು ಜೈಲಿಗಟ್ಟಿದ್ದಲ್ಲದೇ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಹಿಂದೂ ಯುವಕರನ್ನು ಹತ್ಯೆ ಮಾಡಿದ ಬಿಜೆಪಿಯಿಂದ ಹಿಂದೂಗಳೇ ಜಾಸ್ತಿ ಅನ್ಯಾಯಗೊಳಗಾಗಿದ್ದಾರೆ ಎಂದರು.
ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಅವರ ಆಡಳಿತ ಅವಧಿಯಲ್ಲಿ ಮಂಗಳೂರು ಅಭಿವೃದ್ಧಿ ಆಗಲೇ ಇಲ್ಲ. ಬದಲಾಗಿ ಅಭಿವೃದ್ಧಿ ಹೆಸರಲ್ಲಿ ನಡೆದದ್ದು ಭ್ರಷ್ಟಾಚಾರ ಮಾತ್ರ. ಇವರದು ಸಂಪೂರ್ಣ ಜನ ವಿರೋಧಿಯಾದ ಆಡಳಿತವಾಗಿದೆ ಎಂದು ಸುನೀಲ್ ಕುಮಾರ್ ಹೇಳಿದರು.
ಇನ್ನೊಂದು ಕಡೆ ಬಿಜೆಪಿ ಮಂಗಳೂರು ನಗರವನ್ನು ಅಭಿವೃದ್ಧಿಗೊಳಿಸುವ ಯಾವ ಸ್ಪಷ್ಟ ಕಣ್ಣೋಟವನ್ನು ಇರದೆ ಕೇವಲ ಧರ್ಮ ರಾಜಕಾರಣ ಮಾಡುತ್ತಿದೆ. ಇಂತಹ ಪಕ್ಷಗಳಿಂದ ಯಾವ ಸಮುದಾಯಕ್ಕಾಗಲಿ ಲಾಭಾಕ್ಕಿಂತ ನಷ್ಟವೇ ಜಾಸ್ತಿ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಬಡವರ,ಜನಸಾಮಾನ್ಯರ, ಹಿಂದುಳಿದ ವರ್ಗಗಳ, ದಲಿತರ ಸಮಸ್ಯೆಗಳ ಇತ್ಯಾರ್ಥಕ್ಕಾಗಿ ನಿರಂತರ ರಾಜಿರಹಿತ ಹೋರಾಟದ ಕಣದಲ್ಲಿರುವ ಸಿಪಿಐಎಂ ಪಕ್ಷಕ್ಕೆಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಿಪಿಐಎಂ ಜಿಲ್ಲಾ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಸಂತೋಷ್ ಶಕ್ತಿನಗರ, ಯೋಗೀಶ್ ಜಪ್ಪಿನಮೊಗರು, ಮನೋಜ್ ಶೆಟ್ಟಿ, ಜಯಂತಿ ಬಿ ಶೆಟ್ಟಿ, ದಿನೇಶ್ ಶೆಟ್ಟಿ, ಉದಯಚಂದ್ರರೈ, ದಿನೇಶ್ ಅಂಚನ್ ಉಪಸ್ಥಿತರಿದ್ದರು.