×
Ad

ರಾಜ್ಯದಲ್ಲಿ ಬಿಜೆಪಿ ಹೆಚ್ಚುನ ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರಲಿದೆ: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ

Update: 2018-04-30 23:16 IST

ಪುತ್ತೂರು, ಎ. 30: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಆಡಳಿತಕ್ಕೆ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಮುರದಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು. ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಈ ಅನಿವಾರ್ಯತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತಲೂ ಒಂದು ಪಟ್ಟು ಅಧಿಕವಿದೆ. ನನ್ನನ್ನು ಶಾಸಕನಾಗಿ, ಸಂಸದನಾಗಿ ಬೆಳೆಸಿದ ಪುತ್ತೂರಿನ ಜನತೆ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಅವರನ್ನು ಗೆಲ್ಲಿಸುವ ವಿಶ್ವಾಸ ತನಗಿದೆ ಎಂದರು.

ಪುತ್ತೂರಿನಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತದೆ ಎಂಬುದನ್ನು ಸಮೀಕ್ಷೆಗಳು ಪುಷ್ಠೀಕರಿಸಿವೆ. ಆದರೆ ಯಾವುದನ್ನೂ ಹಗುರವಾಗಿ ಪರಿಗಣಿಸಬಾರದು. ಪಕ್ಷದ ಅಭ್ಯರ್ಥಿತನದ ಕುರಿತಂತೆ ಸಮಾಧಾನ ಹೊಂದಿಲ್ಲದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾರನ್ನೂ ಬಿಡದೆ ಪ್ರತಿಯೊಬ್ಬರಲ್ಲೂ ಮತಯಾಚಿಸುವ ವ್ಯವಸ್ಥೆ ಆಗಬೇಕು. ಹೊಸ ಮತದಾರರನ್ನು ಮುಖ್ಯವಾಗಿ ಸಂಪರ್ಕಿಸಬೇಕು. ಮಹಿಳೆಯರು ಹೆಚ್ಚು ಮತವನ್ನು ಸೆಳೆಯುವ ಶಕ್ತಿ ಹೊಂದಿರುವುದರಿಂದ ಮಹಿಳೆಯರು ಪ್ರಚಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಮೋದಿ ಹವಾ

ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಕಾಲಿಟ್ಟ ಬಳಿಕ ಶೇ.3 ರಷ್ಟು ಮತಗಳು ಹೆಚ್ಚುವರಿಯಾಗುವುದು ಮಾಮೂಲು. ಈ ರೀತಿಯಾದರೆ ರಾಜ್ಯದಲ್ಲಿ ಬಿಜೆಪಿಗೆ 18ರಿಂದ 21 ರಷ್ಟು ಸೀಟುಗಳು ಹೆಚ್ಚಳವಾಗುತ್ತದೆ. ನರೇಂದ್ರ ಮೋದಿ ಅವರ ರಾಜ್ಯ ಭೇಟಿಯ ಬಳಿಕ ಚುನಾವಣಾ ಪ್ರಚಾರದ ಖದರ್ ಬದಲಾಗಲಿದೆ. ಮೋದಿ ಹವಾ ಆ ರೀತಿಯಲ್ಲಿರಲಿದೆ ಎಂದು ಅವರು ತಿಳಿಸಿದರು.

ಪಕ್ಷದಿಂದ ತಳಮಟ್ಟದಿಂದ ಬಲವರ್ಧನೆಯ ಯೋಜನೆಗಳನ್ನು ರೂಪಿಸಲಾಗಿದೆ. ಮೈಕ್ರೋ ಮ್ಯಾನೇಜ್‌ಮೆಂಟ್ ಉದ್ದೇಶವನ್ನಿಟ್ಟುಕೊಂಡು ಬೂತ್ ಮಟ್ಟದಿಂದ ಪಕ್ಷ ಹಾಗೂ ಕಾರ್ಯಕರ್ತರ ಸಂಪರ್ಕ ಸಾಧಿಸುವ ಯೋಜನೆಯನ್ನು ಬಿಜೆಪಿ ಹೈಕಮಾಂಡ್ ರೂಪಿಸಿ ಕಾರ್ಯಗತಗೊಳಿಸಿದೆ. ಇವೆಲ್ಲರೂ ಬಿಜೆಪಿಯನ್ನು ಮತ್ತಷ್ಟು ಸದೃಢಗೊಳಿಸುತ್ತಿದ್ದಾರೆ ಎಂದರು.

 ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಉಸ್ತುವಾರಿ ಪುಯಿಲ ಕೇಶವ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಪುುರುಷೋತ್ತಮ ಮುಂಗ್ಲಿಮನೆ ಸ್ವಾಗತಿಸಿದರು. ವಿನಯ ಕಲ್ಲೇಗ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News