×
Ad

ರ್ಯಾಂಕ್ ಪಡೆದ ಮಗಳ ಶಿಕ್ಷಣ ಸಂಸ್ಥೆಯಲ್ಲಿ ತಂದೆ ಬಸ್ ಚಾಲಕ

Update: 2018-04-30 23:59 IST

ಉಡುಪಿ, ಎ. 30: ಈ ಬಾರಿಯ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುವ ಸತ್ಯಶ್ರೀ ರಾವ್ ಅವರ ತಂದೆ, ಮಗಳು ಕಲಿತ ಕುಂದಾಪುರ ವೆಂಕಟರಮಣ ಪಿಯು ಕಾಲೇಜಿನ ಶಾಲಾ ವಾಹನ ಚಾಲಕರಾಗಿದ್ದಾರೆ.

ಹೌದು ವಿಜ್ಞಾನ ವಿಭಾಗದಲ್ಲಿ 600ರಲ್ಲಿ 593 ಅಂಕಗಳನ್ನು ಪಡೆದ ಮಗಳು ಕಲಿತ ಶಾಲೆಯಲ್ಲಿ ತಂದೆ ನಾಗೇಶ್‌ರಾವ್ ಬಸ್ ಚಾಲಕ. ಆದರೆ ಇದು ಮಗಳ ಕಲಿಕೆಗೆ ಅಡ್ಡಿಯಾಗಿಲ್ಲ. ಪ್ರತಿ ತರಗತಿಯಲ್ಲೂ ಶಾಲೆಗೆ ಮೊದಲಿಗಳಾಗಿ ತಂದೆಗೆ ಹೆಮ್ಮೆಯನ್ನು ತಂದವಳು ಸತ್ಯಶ್ರೀ.

ಸತ್ಯಶ್ರೀ ಇಂಗ್ಲೀಷ್ ವಿಷಯದಲ್ಲಿ 93 ಅಂಕಗಳನ್ನು ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ವಿಷಯಗಳಲ್ಲೂ (ಬೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಕಂಪ್ಯೂಟರ್ ಸಾಯನ್ಸ್, ಸಂಸ್ಕೃತ) ತಲಾ 100 ಅಂಕಗಳನ್ನು ಗಳಿಸಿದಳು. ಇಂಗ್ಲೀಷ್‌ನಲ್ಲಿ ಇಷ್ಟೊಂದು ಕಡಿಮೆ ಅಂಕವನ್ನು ನಾನು ನಿರೀಕ್ಷಿಸಿರಲೇ ಇಲ್ಲ. ಇದು ನಾನು ಪಡೆದ ಅತೀ ಕಡಿಮೆ ಮಾರ್ಕ್ ಎಂದು ಸತ್ಯಶ್ರೀ ‘ಪತ್ರಿಕೆ’ಯೊಂದಿಗೆ ಮಾತನಾಡುತ್ತಾ ಬೇಸರ ತೋಡಿಕೊಂಡಳು.

ಕುಂದಾಪುರ ಅಂಕದಕಟ್ಟೆ ನಾಗೇಶ್ ರಾವ್ ಹಾಗೂ ಲಲಿತಾ ರಾವ್ ದಂಪತಿಯ ಎರಡನೇ ಮಗಳು ಸತ್ಯಶ್ರೀ. ಹಿರಿಯ ಮಗಳು ಶೈಲಶ್ರೀ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ಕಲಿಯುತಿದ್ದಾರೆ.

ಮುಂದೆ ಕಂಪ್ಯೂಟರ್ ಸಾಯನ್ಸ್ ಅಥವಾ ಇಎಂಡ್‌ಸಿಯಲ್ಲಿ ಇಂಜಿನಿಯರಿಂಗ್ ಓದುವ ಬಯಕೆ ಇದೆ. ಜೆಇಇ ಪರೀಕ್ಷೆ ಚೆನ್ನಾಗಿ ಆಗಿಲ್ಲ. ಹೀಗಾಗಿ ಸಿಇಟಿ ಫಲಿತಾಂಶವನ್ನು ಎದುರು ನೋಡುತಿದ್ದೇನೆ. ನನ್ನ ರ್ಯಾಂಕ್‌ಗೆ ರಾಜ್ಯದ ಎಲ್ಲೇ ಆಗಲಿ ಸೀಟು ಸಿಗುವ ಒಳ್ಳೆಯ ಕಾಲೇಜಿಗೆ ಸೇರುತ್ತೇನೆ ಎಂದರು.

ಬಿಂದಾಸ್ ಓದು: ನಾನೊಂದು ವೇಳಾ ಪಟ್ಟಿ ನಿಗದಿ ಮಾಡಿ ಓದುತ್ತಿರಲಿಲ್ಲ. ಓದುವಾಗ ಯಾವುದೇ ಒತ್ತಡಕ್ಕೂ ಅವಕಾಶ ನೀಡುತ್ತಿರಲಿಲ್ಲ. ಮನೆಯವರಿಂದಲೂ ನನ್ನ ಮೇಲೆ ಯಾವುದೇ ಒತ್ತಡ ಇರುತ್ತಿರಲಿಲ್ಲ. ಹೀಗಾಗಿ ತಂದೆ ಟಿವಿ ನೋಡುವಾಗ ನಾನು ಅಲ್ಲೇ ಕುಳಿತು ಓದುತ್ತಿದ್ದೆ. ಮನಸ್ಸಾದಾಗ ಟಿವಿ ನೋಡುತಿದ್ದೆ. ಪರೀಕ್ಷೆ ಹಿಂದಿನ ದಿನ  ಕುಳಿತು ಓದುತಿದ್ದೆ. ಓದಿನೊಂದಿಗೆ ಡ್ಯಾನ್ಸ್ ಹಾಗೂ ತ್ರೋಬಾಲ್‌ನಲ್ಲೂ ಭಾಗವಹಿಸುತಿದ್ದೆ ಎಂದರು. ಯಾವುದೇ ಕೋಚಿಂಗ್ ಇಲ್ಲದೇ ಶಾಲಾ ಪಾಠ-ಪ್ರವಚನಗಳ ಮೇಲೆಯೇ ನನ್ನೆಲ್ಲಾ ಸಾಧನೆ ಸಾಧ್ಯವಾಗಿದೆ ಎಂದು ಸತ್ಯಶ್ರೀ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News