ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ: ಹರಿಕೃಷ್ಣ ಬಂಟ್ವಾಳರ ವಿರುದ್ಧ ಕ್ರಮಕ್ಕೆ ಎಸ್‌ಡಿಪಿಐ ಒತ್ತಾಯ
ಮಂಗಳೂರು, ಎ. 30: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿರುವ ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುನೀಬ್ ಬೆಂಗರೆ ಅವರು, ಬಿಜೆಪಿಯ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ಎ.29ರಂದು ಪತ್ರಿಕಾಗೋಷ್ಠಿಯಲ್ಲಿ ಹರಿಕೃಷ್ಣ ಬಂಟ್ವಾಳ ಅವರು ಎಸ್‌ಡಿಪಿಐ ಪಕ್ಷವನ್ನು ಕೋಮುವಾದಿಯೆಂದು ಕರೆದು ಕಾರ್ಯಕರ್ತರಲ್ಲಿ ಹಾಗೂ ಬಂಟ್ವಾಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಕರ್ನಾಟಕ ಮತದಾರರಲ್ಲಿ ಗೊಂದಲವನ್ನು ಸೃಷ್ಟಿಸುವ ಕೆಲಸವನ್ನು ಮಾಡಿದ್ದಾರೆ. ಹತ್ತು ಕೋಟಿರೂ. ವನ್ನು ರಮಾನಾಥ ರೈ ಹಾಗೂ ಕಾಂಗ್ರೆಸಿಗರಿಂದ ಎಸ್.ಡಿ.ಪಿ.ಐ. ಪಕ್ಷ ಪಡೆದಿದೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದು ಮತ್ತು ನಿಖಾಹ್ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಎಸ್.ಡಿ.ಪಿ.ಐ. ಪಕ್ಷವು ಕರ್ನಾಟಕದಲ್ಲಿ ನಡೆಯುತ್ತಿರುವ ಅಸೆಂಬ್ಲಿ ಚುನಾವಣೆಯಲ್ಲಿ ಅನೇಕ ಕಡೆ ಸ್ಪರ್ಧೆ ಮಾಡುತ್ತಿದ್ದು ಪ್ರಸ್ತುತ ಹೇಳಿಕೆಯು ಪಕ್ಷದ ಮತದಾರರು, ಸಾರ್ವಜನಿಕರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಹರಿಕೃಷ್ನ ಬಂಟ್ವಾಳ ರ ಹೇಳಿಕೆಯು ಪಕ್ಷಕ್ಕೆ ಮಾಡಿದ ಅವಮಾನ ಮತ್ತು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.