ನ್ಯಾ. ಲೋಯಾ ಸಾವಿಗೆ ಸಂಬಂಧಿಸಿದ ಕಾರ್ಟೂನ್ ಶೇರ್ ಮಾಡಿದ ಸಂಪಾದಕನ ವಿರುದ್ಧ ದೇಶದ್ರೋಹ ಪ್ರಕರಣ

Update: 2018-05-01 08:13 GMT

ರಾಯಪುರ್, ಮೇ 1: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಬಿ.ಎಚ್. ಲೋಯಾ ಶಂಕಾಸ್ಪದ ಸಾವಿಗೆ ಸಂಬಂಧಿಸಿದ ಕಾರ್ಟೂನ್ ಒಂದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಬಸ್ತರ್ ಮೂಲದ ಪತ್ರಿಕೆಯ ಸಂಪಾದಕರೊಬ್ಬರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ 'ಭೂಮ್ಕಲ್ ಸಮಾಚಾರ್' ಪತ್ರಿಕೆಯ ಸಂಪಾದಕರಾಗಿರುವ ಕಮಲ್ ಶುಕ್ಲ ವಿರುದ್ಧ ಐಪಿಸಿ ಸೆಕ್ಷನ್ 124-ಎ ಅನ್ವಯ  ಕಂಕೆರ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಸ್ಟಿಸ್ ಲೋಯಾ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್ ನಿಲುವಿನ ಬಗೆಗಿನ ಕಾರ್ಟೂನ್ ಒಂದನ್ನು ತಾನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾಗಿ ಶುಕ್ಲಾ ಹೇಳಿಕೊಂಡಿದ್ದಾರೆ. "ದೇಶಾದ್ಯಂತ ಜನರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ, ನಾನೂ ಹಾಗೆಯೇ ಮಾಡಿದೆ.  ಕಾರ್ಟೂನಿನಲ್ಲಿ ಯಾರಿಗೂ ಅಪಮಾನವಾಗುವಂತಹದ್ದೇನೂ ಇಲ್ಲ. ಅದು ದೇಶದ್ರೋಹವೂ ಆಗದು'' ಎಂದು ಶುಕ್ಲ ಹೇಳಿಕೊಂಡಿದ್ದಾರಲ್ಲದೆ ಆ ಪೋಸ್ಟ್ ಅನ್ನು ತಾವು ಫೇಸ್ ಬುಕ್ ನಿಂದ ತೆಗೆದು ಹಾಕಿದ್ದಾಗಿಯೂ ತಿಳಿಸಿದ್ದಾರೆ. ಆದರೆ ಈ ಕಾರ್ಟೂನ್ ನ್ಯಾಯಾಂಗ ಮತ್ತು  ಸರಕಾರಕ್ಕೆ ಅಪಮಾನ ಮಾಡುವಂತಿದೆ ಎಂದು ದೂರುದಾರ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News