ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ: ಹಲವು ಪ್ರಶ್ನೆಗಳ ನಡುವೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರಕಾರ ಹೇಳಿದ್ದೇನು?

Update: 2018-05-01 08:47 GMT

ಹೊಸದಿಲ್ಲಿ, ಮೇ 1: ದೇಶದಲ್ಲಿ ಶೇ 80ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ಸರಕಾರ ತಿಳಿಸಿದೆ. ದೇಶದ ಪ್ರತಿಯೊಂದು ಗ್ರಾಮಕ್ಕೂ ವಿದ್ಯುಚ್ಛಕ್ತಿ ಸಂಪರ್ಕ ದೊರೆತಿದೆ ಎಂದು ಕೇಂದ್ರ ರವಿವಾರ ಘೋಷಿಸಿದ ಬೆನ್ನಲ್ಲೇ ಕೇಳಿ ಬಂದ ಹಲವಾರು ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆಯಲ್ಲದೆ, ಒಂದು ಗ್ರಾಮ ವಿದ್ಯುತ್ತೀಕರಣಗೊಂಡಿದೆ ಎಂದು ಪರಿಗಣಿಸಲ್ಪಡಲು ಅಗತ್ಯವಾದ 10 ಶೇ. ಮನೆಗಳಿಗಷ್ಟೇ ವಿದ್ಯುತ್ ಸಂಪರ್ಕ ಒದಗಿಸಲಾಗಿಲ್ಲ ಎಂದು ತಿಳಿಸಲಾಗಿದೆ.

ಒಂದು ಗ್ರಾಮವು ವಿದ್ಯುತ್ತೀಕರಣಗೊಂಡಿದೆ ಎಂದು ತಿಳಿಯಬೇಕಾದರೆ ಅದರ ಶೇ 10ರಷ್ಟು ಮನೆಗಳು, ಶಾಲೆ, ಆಸ್ಪತ್ರೆಗಳು ವಿದ್ಯುತ್ ಸಂಪರ್ಕ ಹೊಂದಿರಬೇಕೆಂಬ ಮಾನದಂಡವನ್ನು ಹೇಗೆ ಒಪ್ಪಲು ಸಾಧ್ಯ ?, ಹಾಗಾದಲ್ಲಿ ವಿದ್ಯುತ್ತೀಕರಣವೆಂಬುದು ಕೇವಲ ಹೆಸರಿಗೆ ಮಾತ್ರದ ಸಾಧನೆಯಾಗಲಿದೆ ಎಂದು ಹಲವರು ಸರಕಾರವನ್ನು ಟೀಕಿಸಿದ್ದರು.

ವಿವಿಧ ರಾಜ್ಯಗಳಿಂದ ಇತ್ತೀಚಿಗಿನ ವರದಿಗಳ ಪ್ರಕಾರ ಗ್ರಾಮೀಣ ಪ್ರದೇಶಗಳ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಶೇ 82ರಷ್ಟು ಪ್ರಗತಿಯಾಗಿದ್ದು, ವಿವಿಧ ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಶೇ 47ರಿಂದ ಶೇ 100ರಷ್ಟು ಪ್ರಗತಿಯಾಗಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.

ಕೆಲವು ರಾಜ್ಯಗಳಲ್ಲಿ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದೇ ಇರಲು ಅವುಗಳಿರುವ ಸ್ಥಳ, ಅಲ್ಲಿ ಲಭ್ಯ ಸಂಪನ್ಮೂಲಗಳು ಹಾಗೂ ರಾಜ್ಯ ಸರಕಾರಗಳಿಂದ ವಿದ್ಯುತ್ತೀಕರಣಕ್ಕೆ ನಡೆಸಲಾದ ಪ್ರಯತ್ನಗಳ ಮೇಲೆ ಅವಲಂಬಿತವಾಗಿದೆ ಎಂದು ಸರಕಾರ ತಿಳಿಸಿದೆ.

ಈ ಸಮಸ್ಯೆಯನ್ನು ಪರಿಹರಿಸಲು ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನಾ-ಸೌಭಾಗ್ಯ ಎಂಬ ಹೆಸರಿನ ಯೋಜನೆಯನ್ನು ಕಳೆದ ವರ್ಷ ಜಾರಿಗೊಳಿಸಲಾಗಿದ್ದು, ಪ್ರತಿಯೊಂದು ಗ್ರಾಮದ ಕಟ್ಟ ಕಡೆಯ ಮನೆಗೂ ವಿದ್ಯುಚ್ಛಕ್ತಿ ಒದಗಿಸುವುದು ಇದರ ಗುರಿಯಾಗಿದೆ.

ದೇಶದ ಪ್ರತಿಯೊಂದು ಗ್ರಾಮಕ್ಕೂ ವಿದ್ಯುಚ್ಛಕ್ತಿ ಸಂಪರ್ಕವನ್ನು 1000 ದಿನಗಳೊಳಗಾಗಿ ಒದಗಿಸಲು ಯೋಜನೆಯನ್ನು ಪ್ರಧಾನಿ 2015ರಲ್ಲಿ ಜಾರಿಗೊಳಿಸಿದ್ದರು. ಇದರ ಪ್ರಗತಿಯಿಂದ ಸಂತುಷ್ಟವಾದ ಸರಕಾರ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕವೊದಗಿಸುವ ಯೋಜನೆಯನ್ನು ಈ ವರ್ಷದ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವ ಯೋಚನೆಯಲ್ಲಿದೆ. ಮಂದಿನ ವರ್ಷದ ಮಾರ್ಚ್ ಅಂತ್ಯದ ಗಡುವನ್ನು ಈ ಯೋಜನೆಗೆ ಆರಂಭದಲ್ಲಿ ವಿಧಿಸಲಾಗಿತ್ತು.

ಸರಕಾರ ತನ್ನ ಗುರಿಯನ್ನು ಮುಟ್ಟುಲಿದೆ ಎಂಬ ಆತ್ಮ ವಿಶ್ವಾಸವನ್ನು ವಿದ್ಯುತ್ ಸಚಿವ ಆರ್ ಕೆ ಸಿಂಗ್ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News