ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಮದ್ರಸಾ ಶಿಕ್ಷಕ ಶಾಹಿದ್

Update: 2018-05-01 08:46 GMT

ತಿರುವನಂತಪುರಂ, ಮೇ 1: ಕೇರಳದ ಕೊಝಿಕ್ಕೋಡ್ ಜಿಲ್ಲೆಯ ತಿರುವಲ್ಲೂರು ಗ್ರಾಮದ ಮದ್ರಸಾ ಶಿಕ್ಷಕ, 28 ವರ್ಷದ ಟಿ. ಶಾಹಿದ್ ಯುಪಿಎಸ್ಸಿ ಪರೀಕ್ಷೆಯಲ್ಲಿ ತಮ್ಮ ಆರನೇ ಪ್ರಯತ್ನದಲ್ಲಿ ಆಯ್ಕೆಯಾಗಿದ್ದು, 693ನೇ ರ್ಯಾಂಕ್ ಗಳಿಸಿದ್ದಾರೆ.

ಮದ್ರಸಾ ಶಿಕ್ಷಕ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಹಾಗೂ ಝುಲೈಖಾ ದಂಪತಿಯ ಪುತ್ರನಾಗಿರುವ ಶಾಹಿದ್, ತಮ್ಮ ಮನೆಯಲ್ಲಿನ ತೀವ್ರ ಬಡತನದಿಂದಾಗಿ ತಮ್ಮ 10ನೆ ವಯಸ್ಸಿನಲ್ಲಿ ಕೊಝಿಕ್ಕೋಡ್ ನ ಕಪ್ಪಡ್ ಎಂಬಲ್ಲಿ ಅನಾಥಾಶ್ರಮವೊಂದು ನಡೆಸುತ್ತಿರುವ ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಣ ಪಡೆದರು. 12 ವರ್ಷ ಧಾರ್ಮಿಕ ಶಿಕ್ಷಣ ಪಡೆದು ಇಸ್ಲಾಮಿಕ್ ಸೆಮಿನರಿಯಲ್ಲಿ ಒಂಟಿ ಜೀವನ ನಡೆಸಿದ್ದ ಶಾಹಿದ್ ಮುಂದೆ ಧಾರ್ಮಿಕ ಪದವಿ ಪಡೆದು ಮದ್ರಸಾ ಶಿಕ್ಷಕರಾದರು. ಧಾರ್ಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಅವರು ದೂರಶಿಕ್ಷಣದ ಮೂಲಕ ತಮ್ಮ ಹತ್ತನೇ, 12ನೇ ತರಗತಿಯಲ್ಲಿ ತೇರ್ಗಡೆಯಾಗಿ ಮುಂದೆ ಪದವಿಯನ್ನೂ ಪಡೆದರು. "2010ರಿಂದ 2012ರ ತನಕ ಕಣ್ಣೂರಿನ ಮದ್ರಸಾವೊಂದರಲ್ಲಿ 6,000 ರೂ. ವೇತನ ಪಡೆದು ಶಿಕ್ಷಕನಾದೆ'' ಎಂದು ಶಾಹಿದ್ ಹೇಳುತ್ತಾರೆ.

ಏನಾದರೂ ಸಾಧಿಸಬೇಕೆಂಬ ಉದ್ದೇಶದಿಂದ ಅವರು ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿ ಮಲಯಾಳಂ ಸಾಹಿತ್ಯವನ್ನು ತಮ್ಮ ಐಚ್ಛಿಕ ವಿಷಯವನ್ನಾಗಿ ಆರಿಸಿದರು. ದಿಲ್ಲಿಯಲ್ಲಿ ಮುಸ್ಲಿಂ ಲೀಗ್ ನ ವಿದ್ಯಾರ್ಥಿ ವಿಭಾಗ ಎಂಎಸ್‍ಎಫ್ ನಡೆಸುವ ಕೋಚಿಂಗ್ ತರಗತಿಗಳಿಗೂ ಹಾಜರಾದ ಅವರೀಗ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ವಿಜಯದ ನಗೆ ಬೀರುತ್ತಿದ್ದಾರಲ್ಲದೆ,  "ಮದ್ರಸಾಗಳು ಉಗ್ರರನ್ನು ಬೆಳೆಸುವ ತಾಣಗಳಲ್ಲ ಎಂದು ತಾವು ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಸಾಬೀತುಪಡಿಸಿದ್ದೇನೆ" ಎಂದು ಹೇಳುತ್ತಾರೆ. "ಮದ್ರಸಾಗಳೂ ದೇಶಸೇವೆಗೈಯ್ಯಲು ಸಿದ್ಧರಾಗಿರುವ ಅಧಿಕಾರಿಗಳನ್ನು ಸೃಷ್ಟಿಸಬಹುದು'' ಎಂದು ಅವರು ಅಭಿಮಾನದಿಂದ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News