×
Ad

ಜನರಿಗಾಗಿ ಯುವ ಇಂಜಿನಿಯರ್‌ಗಳ ತಂತ್ರಜ್ಞಾನ !

Update: 2018-05-01 14:30 IST

ಮಂಗಳೂರು, ಮೇ 1: ಅಡಿಕೆಯನ್ನು ಪ್ರತ್ಯೇಕಿಸುವ ಯಂತ್ರ, ಸೋಲಾರ್ ಏರ್ ಕೂಲರ್, ರೇಡಿಯೋ ಕಂಟ್ರೋಲ್ಡ್ ಏರ್ ಬೋಟ್, ವಾಟರ್ ಟ್ರೀಟ್‌ಮೆಂಟ್ ಸಿಸ್ಟಮ್, ತ್ಯಾಜ್ಯ ಕಾಗದಗಳ ಮರುಬಳಕೆ ಹೀಗೆ ವಿಭಿನ್ನ ಐಡಿಯಾಗಳಿಗೆ ಭಿನ್ನ ರೂಪ ನೀಡುವ ಪ್ರಯತ್ನ ಸಹ್ಯಾದ್ರಿಯ ಯುವ ಇಂಜಿನಯರ್‌ಗಳದ್ದು. ನಗರದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಟೆಕ್‌ವಿಷನ್ 2018’ರ ಪ್ರದರ್ಶನದಲ್ಲಿ ಕಾಲೇಜಿನ ಯುವ ಇಂಜಿನಿಯರ್‌ಗಳು ಜನಸಾಮಾನ್ಯರ ತುರ್ತು ಮತ್ತು ಅಗತ್ಯ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ತಂತ್ರಜ್ಞಾನದ ಆಲೋಚನೆಗಳಿಗೆ ಹೊಸ ರೂಪು ನೀಡಿದ್ದಾರೆ.

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಇಂದು ನಡೆದ ಈ ಪ್ರದರ್ಶನಕ್ಕೆ ಸಹಾದ್ರಿ ಪ್ರಾಜೆಕ್ಟ್ ಸಪೋರ್ಟ್ ಸ್ಕೀಮ್‌ನಡಿ 20 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಪ್ರಾಜೆಕ್ಟ್ ತಯಾರಿಯ ಅಂಗವಾಗಿ ವಿದ್ಯಾರ್ಥಿಗಳ ತಂಡಗಳು ಜಿಲ್ಲೆಯ ವಿವಿಧ ಕಡೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸರ, ಅಲ್ಲಿನ ಜನರ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಪ್ರಾಜೆಕ್ಟ್‌ಗಳನ್ನು ಕಾಲೇಜಿನ ಮಾರ್ಗದರ್ಶಕರ ನೇತೃತ್ವದಲ್ಲಿ ತಯಾರಿಸಿ ಇಂದು ಪ್ರದರ್ಶಿಸಿದರು.

ಬಿಇ, ಎಂಟೆಕ್ ಮತ್ತು ಎಂಬಿಎ ಮತ್ತು ಬಿಇ ವಿದ್ಯಾರ್ಥಿಗಳ ವಿಟಿಯು ಅಂತಿಮ ವರ್ಷದ ಯೋಜನೆಗಳ ಎಸ್ಪಿಎಸ್‌ಎಸ್ ಮತ್ತು ನಾನ್ ಎಸ್ಪಿಎಸ್‌ಎಸ್ ಯೋಜನೆಗಳು ಸೇರಿದಂತೆ 710ಕ್ಕೂ ಅಧಿಕ ಪ್ರಾಜೆಕ್ಟ್‌ಗಳು ಇಂದು ಪ್ರದರ್ಶನ ಕಂಡಿವೆ. ತಂಡದ ರೂಪದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ಗಳನ್ನು ತಯಾರಿಸಿದ್ದು, ಕಾಲೇಜಿನ 3000ಕ್ಕೂ ಅಧಿಕ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಾಂತ್ರಿಕ ಪ್ರತಿಭೆುನ್ನು ಈ ಮೂಲಕ ಪ್ರದರ್ಶಿಸಲಾಗಿದೆ.

ತಂಪು ನೀಡುತ್ತದೆ ಈ ಸೋಲಾರ್ ಏರ್ ಕೂಲರ್

ಸೋಲಾರ್ ವ್ಯವಸ್ಥೆ ಎಂದಾಕ್ಷಣ ವಿದ್ಯುತ್ ಉತ್ಪಾದನೆ, ಬಿಸಿ ನೀರಿನ ನೆನಪಾಗುವುದು ಸಹಜ. ಆದರೆ ಈ ಬಿಸಿ ವಾತಾವರಣದಲ್ಲಿ ತಂಪಿನ ಹಿತಾನುಭವ ನೀಡುವ ಸೋಲಾರ್ ಏರ್ ಕೂಲರನ್ನು ಅಂತಿಮ ಮೆಕ್ಯಾನಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ರಾಘವೇಂದ್ರ ಶೆಟ್ಟಿ, ನಿತೇಶ್ ಶೆಟ್ಟಿ, ನಿಕ್ಷಿತ್ ಶೆಟ್ಟಿ ಹಾಗೂ ಶ್ರೀಜಿತ್ ತಯಾರಿಸಿದ್ದಾರೆ.

ಸೋಲಾರ್‌ನಿಂದ ಚಲಿಸುವ ಫ್ಯಾನ್ ಎದುರು ನೀರು ಹರಿದಾಗ ಫ್ಯಾನ್‌ನಿಂದ ತಂಪಾದ ಗಾಳಿಯ ಹಿತಾನುಭವವನ್ನು ಪಡೆಯಲು ಈ ಏರ್ ಕೂಲರ್ ನೆರವಾಗುತ್ತದೆ. 8750 ರೂ. ವೆಚ್ಚದಲ್ಲಿ ಈ ಸೋಲಾರ್ ಏರ್ ಕೂಲರನ್ನು ರಚಿಸಲಾಗಿದ್ದು, ಫ್ಯಾನಿನ ಗಾತ್ರ ಹಾಗೂ ಸೋಲಾರ್ ಪ್ಯಾನಲ್ ಗಾತ್ರವನ್ನು ಹೆಚ್ಚಿಸುವ ಮೂಲಕ ಇದನ್ನು ದೊಡ್ಡ ರೀತಿಯಲ್ಲಿ ತಯಾರಿಸಬಹುದು. ಜತೆಗೆ ಐಸ್ ನೀರನ್ನು ಉಪಯೋಗಿಸುವ ಮೂಲಕ ಇನ್ನಷ್ಟು ತಂಪಾದ ಅನುಭವನ್ನು ಪಡೆಯಲು ಸಾಧ್ಯ ಎಂಬುದು ಈ ವಿದ್ಯಾರ್ಥಿಗಳ ಅಭಿಪ್ರಾಯ.

ಬಳಕೆಯಾದ ಪೇಪರ್ ಕಸದ ತೊಟ್ಟಿಗೆ ಹಾಕಬೇಕಿಂದಿಲ್ಲ!

ವಿದ್ಯಾರ್ಥಿಗಳಾದ ನವೀದ್, ಆಕಾಶ್, ವೈಶಾಕ್ ಮತ್ತು ಮಹೇಶ್‌ರವರ ಆಲೋಚನೆಯಿಂದ ಹೊರ ಹೊಮ್ಮಿರುವ ಪೇಪರ್ ರಿಸೈಕ್ಲಿಂಗ್ ಮಿಶನ್‌ನಲ್ಲಿ ರದ್ದಿ ಪೇಪರ್‌ಗಳನ್ನು ಮತ್ತೊ ಬಳಕೆಯ ಪೇಪರ್ ಆಗಿ ಪರಿವರ್ತಿಸಬಹುದಾಗಿದೆ. ಬಳಕೆಯಾದ ಪೇಪರ್‌ಗಳಲ್ಲಿನ ಇಂಕನ್ನು ಅಳಿಸಲು ಅಗತ್ಯವಾದ ರಾಸಾಯನಿಕ ಮಿಶ್ರಣವನ್ನು ಬಳಸುವ ಮೂಲಕ ಮತ್ತೆ ಬಿಳಿಯಾದ ಪೇಪರ್ ಬಳಕೆಗೆ ಸಿಗಲಿದೆ. ಸಿಲಿಂಡರ್ ಆಕಾರದ ಮಿಶನ್ ಒಳಗಡೆ ಸೇರಿ ಮಿಶ್ರಣಗೊಂಡು ಮತ್ತೆ ಅದನ್ನು ನಿಗದಿತ ಆಕಾರಗಳಲ್ಲಿ ಅಚ್ಚೊತ್ತುವ ಮೂಲಕ ಪೇಪರ್ ಮರು ಬಳಕೆಗೆ ಸಿದ್ಧಗೊಳ್ಳುತ್ತವೆ.

ಅಡಿಕೆ ಗುಣಮಟ್ಟ ಪ್ರತ್ಯೇಕಿಸಲು ಈ ಯಂತ್ರದಲ್ಲಿದೆ ಬಹುತಂತ್ರ !

ಪ್ರಥಮ ವರ್ಷದ ಯುವ ವಿಜ್ಞಾನಿಗಳ ತಂಡದಿಂದ ಅನ್ವೇಷಿಸಲ್ಪಟ್ಟ ಅಡಿಕೆ ಗುಣಮಟ್ಟವನ್ನು ಪ್ರತ್ಯೇಕಿಸುವ ‘ಟ್ರೈಕ್ವಾಸ್’ ಯಂತ್ರ ಅತ್ಯಂತ ವಿನೂತನವಾಗಿದೆ. 1800 ರೂ. ವೆಚ್ಚದಲ್ಲಿ ತಯಾರಿರುವ ಈ ಪ್ರಾಜೆಕ್ಟ್ ಯಂತ್ರದಲ್ಲಿ ಅಡಿಕೆಯನ್ನು ಗುಣಮಟ್ಟದ ಆಧಾರದಲ್ಲಿ ಪ್ರತ್ಯೇಕಿಸಬಹುದಾಗಿದೆ. ಇದಕ್ಕಾಗಿ ಅಡಿಕೆಯನ್ನು ತುಂಡು ಮಾಡಬೇಕಾಗಿಲ್ಲ. ಬದಲಿಗೆ ಯಂತ್ರದಲ್ಲಿ ಅಳವಡಿಸಲಾಗಿರುವ ಕ್ಯಾಮರಾವು ಅಡಿಕೆಯ ಗುಣವನ್ನು ತಿಳಿದು ಕಂಪ್ಯೂಟರ್ ಮೂಲಕ ಅಳವಡಿಸಲಾಗಿರುವ ತಂತ್ರಜ್ಞಾನದೊಂದಿಗೆ ಮಿಶನ್‌ಗೆ ಸಂದೇಶವನ್ನು ಕಳುಹಿಸಿ ಗುಣಮಟ್ಟದ ಆಧಾರದಲ್ಲಿ ಒಳ್ಳೆಯ ಅಥವಾ ಹಾಳಾದ ಅಡಿಕೆ ಎಂಬುದಾಗಿ ಪ್ರತ್ಯೇಕಿಸುತ್ತದೆ. ಈ ಯಂತ್ರಕ್ಕೆ ಎಕ್ಸ್‌ರೇಯನ್ನು ಅಳವಡಿಸಿ ಇದಕ್ಕೆ ಇನ್ನಷ್ಟು ಹಣವನ್ನು ವೆಚ್ಚಮಾಡುವ ಮೂಲಕ ಈ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಿಸಿಕೊಳ್ಳಬಹುದು ಎಂದು ತಂಡದ ಧನುಷ್ ವಿಶ್ವಾಸದಿಂದ ಹೇಳುತ್ತಾರೆ.

ಪ್ರಾಜೆಕ್ಟ್ ತಯಾರಿಸುವ ಉದ್ದೇಶದಿಂದ ತಮ್ಮ ತಂಡವನ್ನು ಬಳಂಜ ಗ್ರಾಮಕ್ಕೆ ಮಾರ್ಗದರ್ಶಕರಾದ ಸ್ಫೂರ್ತಿಯವರು ಕರೆದೊಯ್ದೆಗ ಅಲ್ಲಿನ ರೈತರು ಅಡಿಕೆ ಗುಣಮಟ್ಟದ ಬಗ್ಗೆ ತಿಳಿಯಲು ಅಸಾಧ್ಯವಾಗಿರುವುದರಿಂದ ಮಧ್ಯವರ್ತಿಗಳ ಹಾವಳಿಯಿಂದಾಗಿ ನಷ್ಟ ಅನುಭವಿಸುತ್ತಿರುವ ವಿಷಯವನ್ನು ತಿಳಿಸಿದರು. ಆ ಹಿನ್ನೆಲೆಯಲ್ಲಿ ಈ ಯಂತ್ರವನ್ನು ತಯಾರಿಸಲಾಗಿದ್ದು, ಇದಕ್ಕೆ ಸಾಕಷ್ಟು ಹಣಕಾಸಿನ ನೆರವು ದೊರಕಿದರೆ ಈ ಯಂತ್ರವನ್ನು ಸಾಕಷ್ಟು ಸುಸಜ್ಜಿತಗೊಳಿಸಿ ಕಡಿಮೆ ಖರ್ಚಿನಲ್ಲಿ ರೈತರೇ ತಮ್ಮ ಅಡಿಕೆಯನ್ನು ಪ್ರತ್ಯೇಕಿಸಿ ಕ್ವಿಂಟಾಲ್ ಒಂದಕ್ಕೆ ಒಂದ ಸಾವಿರದಿಂದ ಎರಡು ಸಾವಿರ ರೂ.ವರೆಗಿನ ನಷ್ಟವನ್ನು ತಡೆಯಬಹುದಾಗಿದೆ. ಈ ತಮ್ಮ ಅವಿಷ್ಕಾರಕ್ಕೆ ಪೇಟೆಂಟ್ ಪಡೆಯುವ ಉದ್ದೇಶವನ್ನು ಹೊಂದಲಾಗಿದೆ ಎಂದು ಧನುಷ್ ವಿವರ ನೀಡಿದರು.

ಜನರತ್ತ ಸಾಗಿ ಅವರ ಸಮಸ್ಯೆಗಳನ್ನು ಅರಿತು ಅದಕ್ಕೆ ಪೂರಕವಾಗಿ ಪ್ರಾಜೆಕ್ಟ್ ರೂಪದಲ್ಲಿ ತಯಾರಿಸಲಾದ ವಿವಿಧ ಅವಿಷ್ಕಾರಗಳನ್ನು ವೀಕ್ಷಿಸಿದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸ್ಥಾಪಕ ಅಧ್ಯಕ್ಷ ಮಂಜುನಾಥ ಭಂಡಾರಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿ, ಸಲಹೆ ಸೂಚನೆಗಳನ್ನು ನೀಡಿ ಹುರಿದುಂಬಿಸಿದರು.
ಟೆಕ್ ವಿಷನ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಎಂಜಿಎಫ್‌ನ ನಿರ್ದೇಶಕ ಕೆ. ಪ್ರಭಾಕರ ರಾವ್, ಡಿಆರ್‌ಡಿಒ ರಕ್ಷಣಾ ಸಚಿವಾಲಯದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ಹಿರಿಯ ಪ್ರಧಾನ ವಿಜ್ಞಾನಿ ಡಾ. ರಾಮಕೃಷ್ಣ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಯು.ಎಂ. ಭೂಶಿ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News