×
Ad

ಶಕುಂತಳಾ ಶೆಟ್ಟಿ ಎದುರು ಸಂಜೀವ ಮಠಂದೂರು ಸಮರ್ಥ ಅಭ್ಯರ್ಥಿಯಲ್ಲ: ಎಂ.ಎಸ್. ಮುಹಮ್ಮದ್

Update: 2018-05-01 15:18 IST

ಪುತ್ತೂರು, ಮೇ 1: ಶಾಸಕಿ ಶಕುಂತಳಾ ಶೆಟ್ಟಿ ಓರ್ವ ಮಹಿಳೆಯಾಗಿ ಉತ್ತಮ ಕೆಲಸ ಮಾಡಿದ್ದು, ಕೋಟ್ಯಾಂತರ ರೂಪಾಯಿ ಅನುದಾನವನ್ನು ಕ್ಷೇತ್ರಕ್ಕೆ ಒದಗಿಸಿ ಅಭಿವೃದ್ಧಿ ಪಡಿಸಿದ್ದಾರೆ. ಕ್ಷೇತ್ರದ ಜನತೆ ಅವರಿಗೆ ಬೆಂಬಲ ನೀಡಲಿದ್ದು, ಶಕುಂತಳಾ ಶೆಟ್ಟಿ ಅವರ ಎದುರು ಸಂಜೀವ ಮಠಂದೂರು ಸಮರ್ಥ ಅಭ್ಯರ್ಥಿಯಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್ ಹೇಳಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ಬಿಜೆಪಿಗೆ ಒಂದು ಸೀಟೂ ಸಿಗಲ್ಲ. ಬಿಜೆಪಿಯ ಭಿನ್ನಮತ ತಾರಕಕ್ಕೇರಿದೆ. ಸ್ವಾಮೀಜಿಗಳು ಬಿಜೆಪಿ ಮುಖಂಡರ ಮನೆಗೆ ಬಂದು ಓಲೈಸಿ ಪಕ್ಷದ ಪ್ರಚಾರಕ್ಕೆ ಬರುವಂತೆ ಮಾಡಬೇಕಾದ ಸ್ಥಿತಿ ಅವರಿಗೆ ಬಂದಿದೆ. ಕಾಂಗ್ರೆಸ್ ಪಕ್ಷವು ಎಲ್ಲಾ ಸಮುದಾಯಕ್ಕೂ ಆದ್ಯತೆಯನ್ನು ನೀಡಿದ್ದು, ದ.ಕ. ಜಿಲ್ಲೆಯ 8 ಕ್ಷೇತ್ರಗಳಲ್ಲಿ 4 ಅಲ್ಪ ಸಂಖ್ಯಾತರಿಗೆ. 1 ಹಿಂದುಳಿದ ವರ್ಗಕ್ಕೆ , 2 ಬಂಟ ಸಮುದಾಯಕ್ಕೆ ಮತ್ತು 1 ಮೀಸಲು ದಲಿತ ಸಮುದಾಯಕ್ಕೆ ಓದಗಿಸಿ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಆದರೆ ಬಿಜೆಪಿ ಎಂದಿಗೂ ಸಮಾಜಿಕ ನ್ಯಾಯದಲ್ಲಿ ಅವಕಾಶಗಳನ್ನು ನೀಡಿಲ್ಲ. ಒಂದೊಮ್ಮೆ ಕಾಂಗ್ರೆಸ್‌ನಲ್ಲಿದ್ದು ಇದೀಗ ಬಿಜೆಪಿಗೆ ಹೋಗಿರುವ ಹರಿಕೃಷ್ಣ ಬಂಟ್ವಾಳ ಅವರು ಮುಸ್ಲಿಮರು ಬಿಜೆಪಿಗೆ ಬರಬೇಕು ಎಂದು ಕರೆ ನೀಡಿದ್ದಾರೆ. ಅವರು ಮೊದಲು ಅಲ್ಪ ಸಂಖ್ಯಾತರಿಗೆ ಬಿಜೆಪಿ ಎಲ್ಲಿ ಅವಕಾಶ ನೀಡಿದೆ ಎಂಬುದನ್ನು ಸ್ಪಷ್ಟ ಪಡಿಸಲಿ, ಅವರಿಗೆ ಮುಸ್ಲಿಮರನ್ನು ಬಿಜೆಪಿಗೆ ಕರೆಯುವ ಯಾವುದೇ ನೈತಿಕತೆಯಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಸೇರಿದಂತೆ ಅನೇಕ ಭಾಗ್ಯಗಳ ಯೋಜನೆಯನ್ನು ಎಲ್ಲಾ ವರ್ಗದ ಜನರಿಗೆ ಒದಗಿಸಿದ್ದು, ಅವರಿಗೆ ಅಂತಹ ಶಕ್ತಿಯಿದೆ. ಆದರೆ 5 ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಮಾಡಿದ ಬಿಜೆಪಿಗರು ಭ್ರಷ್ಟಾಚಾರ ರಹಿತ ಸ್ಥಿರ ಸರ್ಕಾರ ನೀಡುತ್ತೇವೆ ಎನ್ನುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿ, ಸಚಿವರು ಜೈಲಿಗೆ ಹೋಗಿರುವ, ವಿಧಾನ ಸಭೆಯಲ್ಲಿ ಬ್ಲೂ ಫಿಲಂ ನೋಡಿದ ಇತಿಹಾಸವನ್ನು ರಾಜ್ಯದ ಮತದಾರರು ಮರೆಯಲು ಸಾಧ್ಯವಿಲ್ಲ, ಬಿಜೆಪಿ ಸರ್ಕಾರದಿಂದ ರೋಸಿ ಹೋಗಿದ್ದ ಜನತೆ ಅಂದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಇದೀಗ ಸಿದ್ದರಾಮಯ್ಯ ಅವರ ಜನಪರ ಯೋಜನೆಯನ್ನು ನೋಡಿ ಎರಡನೇ ಬಾರಿಗೆ ಪಕ್ಷಕ್ಕೆ ಅವಕಾಶ ನೀಡಲಿದ್ದಾರೆ ಎಂದರು.

ಡಿ.ವಿ ಅತ್ಮವಿಮರ್ಷೆ ಮಾಡಲಿ

ಸಿದ್ದರಾಮಯ್ಯ ನಾಶವಾಗಲಿದ್ದಾರೆ ಎಂಬ ಹೇಳಿಕೆ ನೀಡಿರುವ ಡಿ.ವಿ.ಸದಾನಂದ ಗೌಡರು ಮೊದಲು ಅತ್ಮ ವಿಮರ್ಷೆ ಮಾಡಿಕೊಳ್ಳಲಿ. ನಿಂತಲ್ಲಿ ಗೆಲ್ಲಲು ಸಾಧ್ಯವಿಲ್ಲವೆಂದು ಕ್ಷೇತ್ರ ಬದಲಾವಣೆ ಮಾಡುತ್ತಾ ಸ್ಪರ್ಧೆ ಮಾಡುತ್ತಿರುವ ಅವರು ಕೊನೆಗೊಮ್ಮೆ ಎಲ್ಲಿಯೂ ಸಲ್ಲದೆ ನಾಶವಾಗಲಿದ್ದಾರೆ.

ಮುಖ್ಯಮಂತ್ರಿಯಾಗಿ ಅವರ ಸ್ವಕ್ಷೇತ್ರವಾಗಿದ್ದ ಪುತ್ತೂರಿಗೆ ಸೇರಿದಂತೆ ರಾಜ್ಯಕ್ಕೆ ಏನೂ ಕೊಡುಗೆ ನೀಡದ ಅವರು ಕೇಂದ್ರದಲ್ಲಿ ರೈಲ್ವೇ ಸಚಿವರಾಗಿ, ಕಾನೂನು ಸಚಿವರಾಗಿ ಇದೀಗ ಅಂಕಿ ಅಂಶ ಸಚಿವರಾಗಿ ಏನೂ ಸಾಧನೆ ಮಾಡಿಲ್ಲ. ಅದಕ್ಕಾಗಿ ಮೋದಿ ಅವರ ಖಾತೆಯನ್ನು ಬದಲಾಯಿಸಿದರು. ಅಲ್ಲಿಯೂ ಅವರ ಸಲ್ಲದವರಾಗಿದ್ದಾರೆ ಎಂದು ದೂರಿದರು.

ಪ್ರದಾನಿ ಮೋದಿ ಹವಾ ದಿನ ದಿನಕ್ಕೆ ಕಡಿಮೆಯಾಗುತ್ತಿದ್ದು, ರಾಜ್ಯ ಚುನಾವಣೆಯ ಬಳಿಕ ಸಂಪೂರ್ಣ ಇಲ್ಲದಂತಾಗುತ್ತದೆ. ಅಮಿತ್ ಶಾ ಚಾಣಾಕ್ಷತನ ರಾಜ್ಯದಲ್ಲಿ ನಡೆಯಲಾರದು. ಸಿದ್ದರಾಮಯ್ಯ ಅವರ ಚಾಣಾಕ್ಷತನದ ಮುಂದೆ ಅಮಿತ್ ಶಾ ಚಾಣಾಕ್ಷತನ ನಡೆಯಲಾರದು ಎಂದ ಅವರು ಗೋ ಹತ್ಯಾ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿಗರು ಮೊದಲು ದೇಶದಲ್ಲಿ ನಡೆಯುತ್ತಿರುವ ಗೋ ಮಾಂಸ ರಫ್ತು ನಿಷೇಧದ ಬಗ್ಗೆ ಮಾತನಾಡಲಿ. ಮೋದಿ ನೇತೃತ್ವದ ಸರ್ಕಾರ ಅಡಿಯಲ್ಲಿಯೇ ಕೋಟ್ಯಾಂತರ ರೂಪಾಯಿ ಗೋ ಮಾಂಸ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ ಇದನ್ನು ತಡೆಯಲಿ. ಕರ್ನಾಟಕದಲ್ಲಿ ಮಕ್ಕಳ ಮೇಲೆ ಅತ್ಯಾಚಾರ ನಡೆದಿಲ್ಲ. ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಹೆಚ್ಚು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆಗಳು ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕದ 5 ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಇಂತಹ ಘಟನೆ ನಡೆದಿಲ್ಲ. ಬಿಜೆಪಿಗರ ದ್ವಂದ್ವ ಹೇಳಕೆಗಳೇ ಅವರಿಗೆ ತಿರುಗುಬಾಣವಾಗಲಿದೆ ಎಂದರು.

ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರಿಗೆ ರಾಜಕೀಯ ಪ್ರಜ್ಞೆಯಿಲ್ಲ. ಭ್ರಮೆಯಲ್ಲಿ ಮಾತನಾಡುವ ಅವರು 94 ಸಿ ತಾನು ಒದಗಿಸಿ ಕೊಟ್ಟಿದ್ದೇನೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ 94ಸಿ ಯೋಜನೆ ಜಾರಿಗೊಂಡಿರುವುದು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಸುಳ್ಳು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಕುಂತಳಾ ಶೆಟ್ಟಿ ಅವರು ಶಾಸಕರಾಗಿ ಎಲ್ಲಾ ಸಮುದಾಯದ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಅವರಿಂದ ಅಲ್ಪ ಸಂಖ್ಯಾತರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಶಕುಂತಳಾ ಶೆಟ್ಟಿ ಅವರನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ವಲೇರಿಯನ್ ಡಯಾಸ್, ಯಾಕೂಬ್ ಹಾಜಿ, ನಿರ್ಮಲ್ ಕುಮಾರ್ ಜೈನ್, ಇಸಾಕ್ ಸಾಲ್ಮರ, ಯೂಸುಫ್ ತಾರಿಗುಡ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News