ಉತ್ತರ ಪ್ರದೇಶ: ದಲಿತ ವ್ಯಕ್ತಿಗೆ ಹಲ್ಲೆಗೈದು ಮೂತ್ರ ಕುಡಿಸಿದ ದುಷ್ಕರ್ಮಿಗಳು
ಲಕ್ನೋ, ಮೇ 1: ಕಳೆದ ತಿಂಗಳು ತಾವು ಗೋಧಿ ಬೆಳೆಯುವ ಗದ್ದೆಯಲ್ಲಿ ಕೆಲಸ ಮಾಡಲು ನಿರಾಕರಿಸಿದ ದಲಿತ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಗೈದು ಆತನಿಗೆ ಬಲವಂತವಾಗಿ ಮೂತ್ರ ಕುಡಿಸಿದ್ದ ನಾಲ್ಕು ಮಂದಿ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಹಜ್ರತಪುರದಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳನ್ನು ವಿಜಯ್ ಸಿಂಗ್ ಮತ್ತಾತನ ಸೋದರರೆಂದು ಗುರುತಿಸಲಾಗಿದೆ.
ಮೇಲ್ವರ್ಗಕ್ಕೆ ಸೇರಿದ್ದ ಆರೋಪಿಗಳು ತನಗೆ ಬಲವಂತವಾಗಿ ಮೂತ್ರ ಕುಡಿಸಿದ್ದೇ ಅಲ್ಲದೆ ತನ್ನ ಮೀಸೆಯನ್ನೂ ಹಿಡಿದೆಳೆದಿದ್ದಾರೆಂದು ಸಂತ್ರಸ್ತ ವ್ಯಕ್ತಿ ತನ್ನ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಸೆಕ್ಷನ್ 323. 506, 342 ಹಾಗೂ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಪರಿಶಿಷ್ಟ ಆಯೋಗ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆಯಲ್ಲದೆ ಬದೌನ್ ಪೊಲೀಸರಿಂದ ವರದಿ ಕೇಳಿದೆ. ಸಂತ್ರಸ್ತ ವ್ಯಕ್ತಿ ಘಟನೆ ನಡೆದ ಎಪ್ರಿಲ್ 23ರಂದೇ ದೂರು ನೀಡಲು ಹಜ್ರತಪುರ್ ಪೊಲೀಸ್ ಠಾಣೆಗೆ ತೆರಳಿದ್ದರೂ ಆತನ ದೂರು ಸ್ವೀಕರಿಸಲು ನಿರಾಕರಿಸಿದ್ದ ಇನ್‍ಸ್ಪೆಕ್ಟರ್ ರಾಜೇಶ್ ಕುಮಾರ್ ರನ್ನು ಕರ್ತವ್ಯಲೋಪಕ್ಕಾಗಿ ಸೇವೆಯಿಂದ ವಜಾಗೊಳಿಸಲಾಗಿದೆಯಲ್ಲದೆ ಅವರ ವಿರುದ್ಧ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.