ಉತ್ತರ ಪ್ರದೇಶ: ಶವಾಗಾರದ ಹೊರಗಿದ್ದ ಮೃತದೇಹವನ್ನು ಕಚ್ಚಿ ತಿಂದ ಬೀದಿನಾಯಿಗಳು
ಅಲಿಘರ್, ಮೇ 1: ಅಲಿಘರ್ ನಗರದ ಆಸ್ಪತ್ರೆಯೊಂದರ ಶವಾಗಾರದ ಹೊರಗೆ ಕಳೇಬರವೊಂದನ್ನು ನಿರ್ಲಕ್ಷ್ಯದಿಂದ ಇರಿಸಿದ ಪರಿಣಾಮ ಹೆಣವನ್ನು ಬೀದಿ ನಾಯಿಗಳು ಕಚ್ಚಿ ತಿಂದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಘಟನೆಯ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
"ಹೆಣವೊಂದನ್ನು ನಾಯಿಗಳು ಮುಕ್ಕುತ್ತಿದ್ದವು ಎಂಬ ಮಾಹಿತಿ ದೊರಕಿದೆ. ಇದು ಮಾನವೀಯತೆಯ ಪ್ರಶ್ನೆಯಾಗಿರುವುದರಿಂದ ಇದಕ್ಕೆ ಕಾರಣರಾದವರ ವಿರುದ್ಧ ತನಿಖೆಯ ನಂತರ ಕ್ರಮ ಕೈಗೊಳ್ಳಲಾಗುವುದು" ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಎಲ್. ಅಗರ್ವಾಲ್ ಹೇಳಿದ್ದಾರೆ.
ಘಟನೆಯ ಸಂಬಂಧ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಫಾರ್ಮಸಿಸ್ಟ್ ಗಳನ್ನು ಆರಂಭಿಕ ತನಿಖೆಯ ನಂತರ ವಜಾಗೊಳಿಸಲಾಗಿದೆ. ಈ ಘಟನೆಯ ವೀಡಿಯೋ ಯಾರು ತೆಗೆದಿದ್ದು ಎಂಬುದು ತಿಳಿದು ಬಂದಿಲ್ಲ.
ಕಳೆದ ತಿಂಗಳಷ್ಟೇ ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಶವಾಗಾರದ ಹೊರಗೆ ಇದ್ದ ಮಹಿಳೆಯೊಬ್ಬಳ ಕಳೇಬರವನ್ನು ನಾಯಿಗಳು ವಸ್ತುಶಃ ತಿಂದಿದ್ದವು. ಮಹಿಳೆಯ ದೇಹ ಚೂರುಚೂರಾಗಿತ್ತಲ್ಲದೆ ತಲೆಬುರುಡೆ ನಾಪತ್ತೆಯಾಗಿತ್ತು.
ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಂತರ ಗಂಭೀರ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಕೆ ಮೃತಪಟ್ಟಿದ್ದಳು. ಈ ಘಟನೆ ಸಂಬಂಧ ಆಕೆಯ ಪತಿ ನೀಡಿದ ದೂರಿನ ಆಧಾರದಲ್ಲಿ ಮೂವರು ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು.