ಉತ್ತರ ಪ್ರದೇಶದ 150 ಶಾಲೆಗಳಿಗೆ 10ನೇ, 12ನೇ ಪರೀಕ್ಷೆಯಲ್ಲಿ ಸೊನ್ನೆ ಫಲಿತಾಂಶ

Update: 2018-05-01 11:26 GMT

ಅಲಹಾಬಾದ್, ಮೇ 1: ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯಲ್ಲಿ ಒಟ್ಟು 150 ಶಾಲೆಗಳು ಶೇಕಡಾ ಸೊನ್ನೆ ಫಲಿತಾಂಶ ದಾಖಲಿಸಿವೆ. ಒಬ್ಬನೇ ಒಬ್ಬ ವಿದ್ಯಾರ್ಥಿ ತೇರ್ಗಡೆಗೊಳ್ಳದ ಶಾಲೆಗಳ ಪೈಕಿ 98 ಶಾಲೆಗಳ ವಿದ್ಯಾರ್ಥಿಗಲು ಹತ್ತನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರೆ, ಉಳಿದ 52 ಶಾಲೆಯ ವಿದ್ಯಾರ್ಥಿಗಳು ಇಂಟರ್ ಮೀಡಿಯಟ್ ಪರೀಕ್ಷೆಗೆ ಹಾಜರಾಗಿದ್ದರು.

ರಾಜ್ಯ ಸರಕಾರ ಈ ಬಾರಿ ಪರೀಕ್ಷಾ ಅಕ್ರಮ ಹಾಗೂ ನಕಲು ತಡೆಯಲು ಕಠಿಣ ಕ್ರಮ ಕೈಗೊಂಡಿದ್ದರಿಂದ ಈ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳೂ ಅನುತ್ತೀರ್ಣರಾಗಿದ್ದಾರೆ ಎಂದು ಮಂಡಳಿ ಕಾರ್ಯದರ್ಶಿ ನೀನಾ ಶ್ರೀವಾಸ್ತವ ಹೇಳಿದ್ದಾರೆ.

ಕಠಿಣ ಕ್ರಮಗಳಿಂದಾಗಿ ಹಲವಾರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದರೆ ಇನ್ನು ಕೆಲವರಿಗೆ ನಕಲು ಮಾಡಲು ಅವಕಾಶವೇ ಇಲ್ಲದಿದ್ದುದರಿಂದ ಹಲವರು ಅನುತ್ತೀರ್ಣರಾಗಿದ್ದಾರೆಂದು ಮಂಡಳಿ ಮೂಲಗಳು ತಿಳಿಸಿವೆ.

ಶೇಕಡಾ ಸೊನ್ನೆ ಫಲಿತಾಂಶ ಪಡೆದ ಹೆಚ್ಚಿನ ಶಾಲೆಗಳು ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆಗಳಾಗಿವೆ. ಪರೀಕ್ಷಾ ನಕಲು ಮಾಫಿಯಾಗೆ ಕುಖ್ಯಾತವಾಗಿರುವ ಗಝಿಪುರ್ ನ 17 ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ತೇರ್ಗಡೆಯಾಗಿಲ್ಲ. ಅಲಹಾಬಾದ್ ಮತ್ತು ಆಝಂಘರ್ ನಲ್ಲಿ ಆರು ಶಾಲೆಗಳಿಗೆ ಶೇಕಡಾ ಸೊನ್ನೆ ಫಲಿತಾಂಶ ದೊರೆತಿದ್ದರೆ, ಹರ್ದೋಯಿ, ಬಹ್ರೈಚ್, ಮೌ ಹಾಗೂ ಮಿರ್ಜಾಪುರದಲ್ಲಿ ತಲಾ ಐದು ಶಾಲೆಗಳು ಈ ಪಟ್ಟಿಯಲ್ಲಿ ಸೇರಿವೆ.

ಆಗ್ರಾ, ಮಥುರಾ, ಅಲಿಘರ್, ಅಮ್ರೋಹ, ಲಕ್ನೋ, ಗೋರಖಪುರ್, ಜೌನ್‌ಪುರ್ ಮುಂತಾದೆಡೆಗಳ ಕೆಲವು ಶಾಲೆಗಳೂ ಪರೀಕ್ಷೆಯಲ್ಲಿ ಸಂಪೂರ್ಣ ವಿಫಲವಾಗಿವೆ. ಈ ಬಾರಿ ರಾಜ್ಯದ 8,000ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತಲ್ಲದೆ ನಕಲು ಮಾಫಿಯಾ ತಡೆಯಲು ವಿಶೇಷ ಕಾರ್ಯ ಪಡೆಯನ್ನೂ ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News