ಇನ್ನು ಮುಂದೆ ವಿಮಾನ ಪ್ರಯಾಣದ ವೇಳೆ ಇಂಟರ್ ನೆಟ್ ಬಳಕೆಗೆ, ಫೋನ್ ಕರೆಗೆ ನಿರ್ಬಂಧವಿಲ್ಲ
ಹೊಸದಿಲ್ಲಿ, ಮೇ 1: ವಿಮಾನ ಪ್ರಯಾಣದ ವೇಳೆ ಮೊಬೈಲ್ ಕರೆ ಹಾಗು ಇಂಟರ್ ನೆಟ್ ಸೇವೆಗಳಿಗೆ ಕೊನೆಗೂ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನು ಮುಂದೆ ವಿಮಾನ ಪ್ರಯಾಣದ ವೇಳೆ ಮೊಬೈಲ್ ಕರೆಯಲ್ಲಿ ಮಾತನಾಡಬಹುದಾಗಿದೆ. ಆದರೆ ಸರಕಾರದ ಜಾರಿಗೆ ಇನ್ನೂ 3-4 ತಿಂಗಳು ಕಾಯಬೇಕಾಗಿದೆ.
ವಿಮಾನದಲ್ಲಿ ಪ್ರಯಾಣಿಸುವಾಗ ಮೊಬೈಲ್ ಪೋನ್ ಮತ್ತು ಇಂಟರ್ ನೆಟ್ ಬಳಕೆಗೆ ಅವಕಾಶ ನೀಡುವ ಬಗ್ಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಕೆಲವು ಸಮಯಗಳ ಹಿಂದೆ ಶಿಫಾರಸು ಮಾಡಿತ್ತು. ಇದೀಗ ಕೇಂದ್ರ ಸರಕಾರ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ. ವಿಮಾನದಲ್ಲಿ ಇಂಟರ್ ನೆಟ್ ಸೌಲಭ್ಯ ನೀಡುವ ತಂತ್ರಜ್ಞಾನ ಈಗ ಲಭ್ಯವಿದೆ. ಇದನ್ನು ನಿರ್ಬಂಧಿಸುವ ಯಾವುದೇ ತಡೆಗಳು ಇಲ್ಲ. ಹಾಗಿರುವಾಗ ವಿಮಾನ ಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಈ ಸೇವೆಗಳನ್ನು ನೀಡುವ ಬಗ್ಗೆ ಯೋಚಿಸಬಹುದು ಎಂದು ಅದು ಹೇಳಿತ್ತು.
ವಿಮಾನವು 3000 ಮೀಟರ್ ಎತ್ತರ ತಲುಪಿದ ನಂತರ ಸ್ಮಾರ್ಟ್ ಫೋನ್ ಗಳನ್ನು ಉಪಯೋಗಿಸಲು ಪ್ರಯಾಣಿಕರಿಗೆ ಅನುಮತಿಸುವ ಕ್ರಮವನ್ನು ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರರಾಜನ್ ಅನುಮೋದಿಸಿದ್ದಾರೆ.
“ಟೆಲಿಕಾಂ ಕಂಪೆನಿಗಳು, ಏರ್ ಲೈನ್ಸ್ ಹಾಗು ಇತರ ಮಧ್ಯವರ್ತಿಗಳೊಂದಿಗೆ ಮಾತುಕತೆ ನಡೆಸಲು ಸಮಯಾವಕಾಶದ ಅಗತ್ಯವಿರುವುದರಿಂದ ಮುಂದಿನ 3-4 ತಿಂಗಳಲ್ಲಿ ಈ ಕ್ರಮ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ” ಎಂದು ಸುಂದರರಾಜನ್ ಹೇಳಿದ್ದಾರೆ.