ಅಡ್ವಾಣಿಗೆ ಕಿಂಚಿತ್ತೂ ಗೌರವ ನೀಡದ ಪ್ರಧಾನಿ ಮೋದಿ ದೇವೇಗೌಡರನ್ನು ಹೊಗಳಿದ್ದೇಕೆ ?
ಮಂಗಳೂರು, ಮೇ 1: ಅನಾರೋಗ್ಯದಿಂದ ಬಳಲುತ್ತಿರುವ ತನ್ನ ರಾಜಕೀಯ ಗುರು ಎಲ್.ಕೆ.ಅಡ್ವಾಣಿಗೆ ಕಿಂಚಿತ್ತೂ ಗೌರವ ಕೊಡದೆ ಪ್ರಧಾನಿ ನರೇಂದ್ರ ಮೋದಿ ಉಡುಪಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಹೊಗಳಲು ಕಾರಣ ಏನು? ಎಂದು ಎಐಸಿಸಿ ವಕ್ತಾರ ಜೈವೀರ್ ಶೆರ್ಗಿಲ್ ಪ್ರಶ್ನಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ದೇವೇಗೌಡರನ್ನು ಕಾಂಗ್ರೆಸ್ಸಿಗರು ಅವಮಾನಿಸುತ್ತಾರೆ. ಆದರೆ, ತಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ ಆದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ತಾನು ಕುಮಾರ ಸ್ವಾಮಿಯನ್ನು ಕುಟುಂಬದಿಂದಲೇ ಹೊರಗೆ ಹಾಕುತ್ತೇನೆ ಎಂದು ದೇವೆಗೌಡ ಗುಡುಗುತ್ತಾರೆ. ಇತ್ತ ಪ್ರಧಾನಿ ಮೋದಿ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳುತ್ತಾರೆ. ಯಾಕೆ ಹೀಗೆ ? ಕರ್ನಾಟಕದ ಪ್ರಜ್ಞಾವಂತ ಮತದಾರರಿಗೆ ಇವರು ಮೋಸ ಮಾಡುತ್ತಿದ್ದಾರೆಯೇ ? ಎಂದು ಪ್ರಶ್ನಿಸಿದರು.
ಉಡುಪಿ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎನ್ನುವ ಮೂಲಕ ಪರೋಕ್ಷವಾಗಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಾಧನೆಯನ್ನು ಕೊಂಡಾಡಿದ್ದಾರೆ. ಅದಕ್ಕಾಗಿ ಪ್ರಧಾನಿಗೆ ಅಭಿನಂದಿಸುತ್ತೇನೆ ಎಂದ ಜೈವೀರ್ ಶೆರ್ಗಿಲ್, ಕೇಂದ್ರವು ರಾಜ್ಯದ ಅಭಿವೃದ್ಧಿಗೆ ಯಾವ ಕೊಡುಗೆ ನೀಡಿದೆ ? ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಯಾಕೆ ಮುಂದಾಗಿಲ್ಲ, ಮಂಗಳೂರು ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಮೂರನೆ ಹಂತದ ಅನುದಾನ ಯಾಕೆ ಬಿಡುಗಡೆ ಮಾಡಿಲ್ಲ, ಕುಳಾಯಿ ಜೆಟ್ಟಿ ನಿರ್ಮಾಣಕ್ಕೆ ಯಾಕೆ ಪ್ರಯತ್ನಿಸಿಲ್ಲ, ಬ್ಯಾಂಕ್‌ಗಳನ್ನು ದೋಚುತ್ತಿರುವ ಬಂಡವಾಳ ಶಾಹಿಗಳ ರಕ್ಷಣೆಯಲ್ಲಿ ತೊಡಗಿರುವ ಪ್ರಧಾನಿ ಬಡರೈತರ ಸಾಲ ಮನ್ನಾ ಯಾಕೆ ಮಾಡಿಲ್ಲ, ಯುವಜನರಿಗೆ ಉದ್ಯೋಗವನ್ನು ಯಾಕೆ ಸೃಷ್ಟಿಸಿಲ್ಲ, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಯಾಕೆ ಮನ್ನಣೆ ನೀಡಿಲ್ಲ, ರಾಜ್ಯದ ಸಿಆರ್‌ಪಿಎಫ್ ಮುಖ್ಯ ಕಚೇರಿಯನ್ನು ಉತ್ತರಪ್ರದೇಶಕ್ಕೆ ವರ್ಗಾಯಿಸಲು ನಿರ್ಧರಿಸಿದ್ದು ಯಾಕೆ? ಎಂದು ಪ್ರಶ್ನಿಸಿದರು.
ಅಪರಾಧ, ಭ್ರಷ್ಟ, ಕೋಮು ಹಾವಳಿಯಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಜಾಹಿರಾತುಗಳಲ್ಲಿ ಮಾತ್ರ ಬಿಜೆಪಿಯ ಅಭಿವೃದ್ಧಿ ಆಗುತ್ತಿದೆಯೇ ವಿನಃ ಯಾವುದೂ ಕಾರ್ಯಗತಗೊಂಡಿಲ್ಲ. ನರೇಂದ್ರ ಮೋದಿ ಸಹಿತ ಬಿಜೆಪಿಗರು ಜನರಿಗೆ ಮೋಸ ಮಾಡುತ್ತಲೇ ಇದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಂತಹ ಸ್ವೇಹಿತರಿಗೆ ವಂಚಿಸಿದ ಮೋದಿ ಪಕೋಡಾ ಅಥವಾ ಪಾನ್ ಮಾರಾಟ ಮಾಡಲು ಯುವಜನತೆಗೆ ಕರೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಅಧಿಕಾರಕ್ಕೇರಿದರೆ ಯುವಜನರು ಪಕೋಡಾ ಅಥವಾ ಪಾನ್ ಮಾರಾಟ ಮಾಡಬೇಕಾದೀತು ಎಂದು ಜೈವೀರ್ ಶೆರ್ಗಿಲ್ ಹೇಳಿದರು.
ಸುದ್ದಿಗೋಷ್ಠಿ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಶಾಸಕ ಸುರೇಶ್ ಶೆಟ್ಟಿ, ಡಿಸಿಸಿ ವಕ್ತಾರ ಎ.ಸಿ.ವಿನಯರಾಜ್, ಸಂತೋಷ್ ಶೆಟ್ಟಿ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.