×
Ad

ಮೋದಿ ಉಡುಪಿ ಭೇಟಿ: ನಾಲ್ಕು ತಾಸು ಸಾರ್ವಜನಿಕರಿಗೆ ಕಿರಿಕಿರಿ

Update: 2018-05-01 19:21 IST

ಉಡುಪಿ, ಮೇ 1: ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಏರ್ಪಡಿಸಲಾದ ಬಿಗಿ ಬಂದೋಬಸ್ತ್‌ನಿಂದಾಗಿ ಸಾರ್ವಜನಿಕರು ಸುಮಾರು ನಾಲ್ಕು ತಾಸುಗಳ ಕಾಲ ತೊಂದರೆ ಅನುಭವಿಸುವಂತಾಯಿತು.

ಮಧ್ಯಾಹ್ನ 12 ಗಂಟೆಗೆ ಆದಿಉಡುಪಿಯಿಂದ ಕರಾವಳಿ ಬೈಪಾಸ್, ಬನ್ನಂಜೆ, ಸಿಟಿಬಸ್ ನಿಲ್ದಾಣ, ಕಡಿಯಾಳಿ, ಇಂದ್ರಾಳಿವರೆಗಿನ ರಸ್ತೆಯ ಒಂದು ಬದಿ ಯನ್ನು ಟ್ರಾಫಿಕ್ ಮುಕ್ತಗೊಳಿಸಲಾಗಿತ್ತು. ಅದಕ್ಕಾಗಿ ಈ ರಸ್ತೆಯನ್ನು ಸೇರುವ ಇತರ ರಸ್ತೆಗಳನ್ನು ಬ್ಯಾರಿಗೇಡ್ ಹಾಕಿ ಬಂದ್ ಮಾಡಲಾಗಿತ್ತು.

ಇನ್ನೊಂದು ಬದಿಯ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಸ್ಥಳೀಯರು ಮಧ್ಯಾಹ್ನ ಮನೆಗೆ ಊಟಕ್ಕೆ ಹೋಗಲು ಕೂಡ ತೊಂದರೆ ಪಡಬೇಕಾಯಿತು. ಕೆಲವು ಕಡೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಸುಡು ಬಿಸಿಲಿನಲ್ಲಿ ಕಾರ್ಯಕರ್ತರು

ಬೇಸಿಗೆಯಾಗಿರುವುದರಿಂದ ಇಡೀ ಮೈದಾನಕ್ಕೆ ಶಾಮಿಯಾನ ಹಾಕಲು ಬಿಜೆಪಿ ಮುಖಂಡರು ನಿರ್ಧರಿಸಿದ್ದರು. ಆದರೆ ಕೊನೆಯಗಳಿಗೆಯಲ್ಲಿ ಶಾಮಿಯಾನ ವನ್ನು ರದ್ದು ಪಡಿಸಿ ಮೈದಾನದ ಕಾಲು ಭಾಗಕ್ಕೆ ಮಾತ್ರ ಹಾಕಲಾಗಿತ್ತು.

ಇದರಿಂದ ಬಹುತೇಕ ಕಾರ್ಯಕರ್ತರು ಸುಡು ಬಿಸಿಲಿನಲ್ಲೇ ಕುಳಿತುಕೊಳ್ಳಬೇಕಾಯಿತು. ಹೆಚ್ಚಿನವರು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ 4ಗಂಟೆವರೆಗೆ ಬಿಸಿಲಿನಲ್ಲೇ ಕೂರಬೇಕಾಯಿತು. ಬಿಸಿಲಿನ ತಾಪವನ್ನು ತಪ್ಪಿಸಲು ಕೆಲವರು ಕೊಡೆ ಹಿಡಿದಿದ್ದರೆ, ಇನ್ನು ಕೆಲವರು ಪೇಪರ್, ಬಿಜೆಪಿ ಟೊಪ್ಪಿಯನ್ನು ಧರಿಸಿದ್ದರು. ಸಭಿಕರಿಗೆ ಮಜ್ಜಿಗೆ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪತ್ರಕರ್ತರಿಗೆ ಸಮಸ್ಯೆ: ಸಮಾವೇಶದ ಮೊದಲ ಸಾಲಿನಲ್ಲಿ ಪತ್ರಕರ್ತರಿಗೆ ಯಾವುದೇ ಶಾಮಿಯಾನ ಇಲ್ಲದೆ ಸುಡು ಬಿಸಿಲಿನಲ್ಲಿ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದಕ್ಕೆ ಕೆಲವು ಪತ್ರಕರ್ತರು ಕೊಡೆಯನ್ನು ಅರಳಿಸಿ ಕುಳಿತಿದ್ದರು. ಇದಕ್ಕೆ ಹಿಂದಿನಲ್ಲಿ ಕೂತಿದ್ದ ಕೆಲವರು ವಿರೋಧ ವ್ಯಕ್ತಪಡಿಸಿದರು. ಆ ವೇಳೆ ಪತ್ರಕರ್ತರು ಮತ್ತು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮಠಕ್ಕೆ ಭೇಟಿ ನೀಡಿಲ್ಲ: ಪ್ರಧಾನಿಯಾದ ಬಳಿಕ ಉಡುಪಿಗೆ ಮೊದಲ ಬಾರಿಗೆ ಆಗಮಿಸಿದ ನರೇಂದ್ರ ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡದೆ ವಾಪಾಸ್ಸಾಗಿದ್ದಾರೆ.

ಮೋದಿ ಉಡುಪಿ ಶ್ರೀಕೃಷ್ಣ ಮಠ ಹಾಗೂ ಪೇಜಾವರ ಸ್ವಾಮೀಜಿಯನ್ನು ಭೇಟಿ ಮಾಡುವಂತೆ ಜಿಲ್ಲಾ ಬಿಜೆಪಿ ಮುಖಂಡರು ಈ ಹಿಂದೆ ಮನವಿ ಮಾಡಿದ್ದರು. ಕೊನೆಯ ಕ್ಷಣದವರೆಗೆ ಮೋದಿ ಮಠಕ್ಕೆ ಭೇಟಿ ನೀಡುವ ಬಗ್ಗೆ ನಿರೀಕ್ಷೆ ಹೊಂದಲಾಗಿತ್ತು. ಆದರೆ ಹೆಲಿಪ್ಯಾಡ್‌ನಿಂದ ನೇರ ಸಮಾವೇಶಕ್ಕೆ ಆಗಮಿಸಿದ ಮೋದಿ, ನಂತರವೂ ಮಠಕ್ಕೆ ಭೇಟಿ ನೀಡದೆ ನೇರ ಹೆಲಿಪ್ಯಾಡ್ ಮೂಲಕ ಚಿಕ್ಕೋಡಿಗೆ ಪ್ರಯಾಣ ಬೆಳೆಸಿದರು.

ರಾಜಕೀಯ ಸಮಾವೇಶ ಇರುವಾಗ ಧಾರ್ಮಿಕ ಕೇಂದ್ರಗಳಿಗೆ ಮೋದಿ ಭೇಟಿ ನೀಡುವುದಿಲ್ಲ ಎಂದು ಮೋದಿ ಮಠಕ್ಕೆ ಭೇಟಿ ನೀಡದಿರುವುದಕ್ಕೆ ಕಾರಣಗಳನ್ನು ನೀಡಲಾಗುತ್ತದೆ.

ಮೋದಿ ಸಭೆಯಲ್ಲಿ ಶಿರೂರು ಸ್ವಾಮೀಜಿ

ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಕೊನೆಯ ಗಳಿಗೆಯಲ್ಲಿ ವಾಪಾಸ್ಸು ಪಡೆದು ಕೊಂಡಿದ್ದ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಭೆಯ ಮೊದಲ ಸಾಲಿನಲ್ಲಿ ಕೂತು ನರೇಂದ್ರ ಮೋದಿಯ ಭಾಷಣ ಆಲಿಸಿದರು.

‘ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ ಹೇಳಿದಂತೆ ಮೋದಿಯನ್ನು ಭೇಟಿ ಮಾಡಲು ಹೋಗಿದ್ದೇನೆ. ಆದರೆ ವೇದಿಕೆಯಲ್ಲಿ 16 ಮಂದಿಗೆ ಮಾತ್ರ ಕುಳಿತುಕೊಳ್ಳುವ ಅವಕಾಶ ಇದ್ದುದರಿಂದ ಮೋದಿಯನ್ನು ಭೇಟಿ ಮಾಡಲು ಆಗಿಲ್ಲ. ಅವರ ಭಾಷಣ ಕೇಳಿ ಬಂದಿದ್ದೇನೆ ಎಂದು ಶಿರೂರು ಸ್ವಾಮೀಜಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News