×
Ad

ಕೋಮುಗಲಭೆಯಲ್ಲಿ ಅತೀ ಹೆಚ್ಚು ಬಿಲ್ಲವ ಯುವಕರು ಬಳಕೆ: ಗೋಪಾಲ ಅಂಚನ್

Update: 2018-05-01 21:07 IST

ಮಂಗಳೂರು, ಮೇ 1: ಬಂಟ್ವಾಳದ ವಿವಿಧೆಡೆ ನಡೆದ ಕೋಮುಗಲಭೆಗಳಲ್ಲಿ ಬಿಲ್ಲವ ಸಮುದಾಯದ ಅತೀ ಹೆಚ್ಚು ಯುವಕರನ್ನು ಬಳಸಿಕೊಳ್ಳಲಾಗಿತ್ತು ಎಂದು ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಗೋಪಾಲ್ ಅಂಚನ್ ತಿಳಿಸಿದ್ದಾರೆ.

ಕುದ್ರೋಳಿಯ ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳವಾರ ನಗರದ ಕುದ್ರೋಳಿ ನಾರಾಯಣಗುರು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಲ್ಲವ ಜಾಗೃತಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕೋಮು ಹಿಂಸಾಚಾರದಲ್ಲಿ ಗುರುತಿಸಿಕೊಂಡವರು ಮನಸ್ಸು ಬದಲಾಯಿಸಿ ಸಮಾಜದ ಮುಖ್ಯವಾಹಿನಿಗೆ ಬರುತ್ತೇನೆ ಎಂದಾಗ ಸಮಾಜದಲ್ಲಿ ಅವರನ್ನು ಸ್ವಾಗತಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಗೋಪಾಲ ಅಂಚನ್ ಎಲ್ಲಾ ಜಾತಿ ಧರ್ಮವನ್ನು ಒಪ್ಪಿದ ಸಂಸ್ಕೃತಿ ತುಳುನಾಡಿ ನದ್ದಾಗಿದೆ. ತುಳುನಾಡಿನಲ್ಲಿ ಬಹು ಸಂಸ್ಕೃತಿಯ ಮೇಲೆ ಏಕ ಸಂಸ್ಕೃತಿಯ ಆಕ್ರಮಣ ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವ ಸಮಾಜದ ಬಂಧುಗಳನ್ನು ಕೋಮು ಹಿಂಸಾ ಚಟುವಟಿಕೆಗಳಿಗೆ ಬಳಸಿಕೊಳ್ಳುವುದರ ವಿರುದ್ಧ ಸಮಾಜ  ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಇಂದಿನ ಯುವಜನರು ದಾರಿತಪ್ಪುತ್ತಿದ್ದು, ಇದಕ್ಕೆ ಬಡತನ ಮೂಲ ಕಾರಣರಾದರೆ ಶ್ರೀಮಂತರು ಕೂಡ ದಾರಿತಪ್ಪುತ್ತಿರುವುದು ವಿಪರ್ಯಾಸ. ಬಿಲ್ಲವ ಸಮುದಾಯಕ್ಕೆ ಎಲ್ಲಾ ಕ್ಷೇತ್ರದಲ್ಲಿಯೂ ಎತ್ತರದ ಸ್ಥಾನಮಾನ ಸಿಕ್ಕಿದೆ. ಆದರೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲು ಮಾತ್ರ ಬಿಲ್ಲವರಿಗೆ ಸಾಧ್ಯವಾಗಲಿಲ್ಲ. ಬಿಲ್ಲವರ ಇತಿಹಾಸ ದೊಡ್ಡದು. ಬಿಲ್ಲವರು ಎಲ್ಲಾ ಜಾತಿ, ಧರ್ಮದ ಜೊತೆ ಬಾಳಿದ್ದಾರೆ. ಮಾನವೀಯತೆ ಬಿಲ್ಲವರ ಧ್ಯೇಯವಾಗಬೇಕು ಎಂದ ಗೋಪಾಲ ಅಂಚನ್, ಬ್ರಹ್ಮಶ್ರೀ ನಾರಾಯಣ ಗುರು ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರು ಕೋಮು ಸಂಘರ್ಷದ ಕಡೆ ವಾಲುವುದಿಲ್ಲ ಎಂದರು.

ಮಾನಸಿಕ ಆರೋಗ್ಯ ತಜ್ಞೆ, ರೋಶನಿ ನಿಲಯ ಮಂಗಳೂರಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ರಮೀಳಾ ಶೇಖರ್ ಮಾತನಾಡಿ, ಇಂದಿನ ದಿನಗಳಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ಅಂತರ ಹೆಚ್ಚುತ್ತಿವೆ. ಕುಟುಂಬದ ಸದಸ್ಯರು ಅಪರಿಚಿತರಾಗುತ್ತಿದ್ದಾರೆ. ಮಕ್ಕಳು ಪೋಷಕರ ಮಾತು ಕೇಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ರಂಗ ನಿರ್ದೇಶಕ ಪರಮಾನಂದ ವಿ. ಸುವರ್ಣ ಮಾತನಾಡಿ, ಶಾಂತಿಯಿಂದ ಸಮಾಜವನ್ನು ಕಟ್ಟಬೇಕೇ ವಿನಃ ಅಶಾಂತಿಯಿಂದಲ್ಲ. ಹಿರಿಯರಿಗೆ ಗೌರವ ನೀಡುವ ಪ್ರವೃತ್ತಿ ಯುವಕರಲ್ಲಿ ದೂರವಾಗುತ್ತಿದೆ. ಇಂದಿನ ಕೆಲ ಮಕ್ಕಳು ಅವರ ಸಿದ್ಧಾಂತದಿಂದ ಹೊರಬರುತ್ತಿಲ್ಲ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ ಚಂದ್ರ ಡಿ. ಸುವರ್ಣ, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗುರುನಗರ, ಪದವಿನಂಗಡಿಯ ಅಧ್ಯಕ್ಷ ಗಣೇಶ್ ಬಂಗೇರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಕ್ಷಿತ್, ಶಕೀಲಾ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News