ಸಾವಿರ ಬೀಡಿಗೆ ಮಜೂರಿ ಎಷ್ಟೆಂದು ಗೊತ್ತಿಲ್ಲದವರು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು: ಮುನೀರ್ ಕಾಟಿಪಳ್ಳ
ಮಂಗಳೂರು, ಮೇ 1: ತುಳುನಾಡಿನ ಬಹುತೇಕ ಮನೆಗಳಲ್ಲಿ ಇಂದು ಒಂದಿಷ್ಟು ಬೆಳಕು ಕಾಣುತ್ತಿದ್ದರೆ, ಅದರ ಹಿಂದೆ ಬೀಡಿ ಕಟ್ಟುವ ತಾಯಂದಿರ ಪರಿಶ್ರಮವಿದೆ. ಕಷ್ಟಪಟ್ಟು ಮನೆ ಕೆಲಸ ಮಾಡುತ್ತಲೇ ಬೀಡಿಯನ್ನೂ ಕಟ್ಟಿ ಕುಟುಂಬಗಳನ್ನು ನಡೆಸಿದ್ದಾರೆ, ಅನ್ನ, ಬಟ್ಟೆಗಳನ್ನು ಹೊಂದಿಸಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಹೇಳಿದರು.
ಇಂದು ಕುಳಾಯಿ ಜಂಕ್ಷನ್ ನಲ್ಲಿ ಸಿಪಿಐಎಂ ಪಕ್ಷದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದು ಬೀಡಿ ಉದ್ಯಮ ಸಂಕಷ್ಟದಲ್ಲಿದೆ. ಬೀಡಿ ಕಟ್ಟುವ ತಾಯಂದಿರಿಗೆ ಮಜೂರಿ ಹೆಚ್ಚಿಸಲು ಮಾಲೀಕರು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಬೀಡಿ ಕಟ್ಟುವ ತಾಯಂದಿರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಯಾವ ಸಂಕಟಗಳ ಅರಿವೂ ಇಲ್ಲದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು, ತಮ್ಮನ್ನು ಗೆಲ್ಲಿಸಿದರೆ ಬಡವರನ್ನು ಉದ್ಧಾರ ಮಾಡುತ್ತೇವೆ ಎಂದು ಭಾಷಣ ಬಿಗಿಯುತ್ತಿದ್ದಾರೆ. ಸಾವಿರ ಬೀಡಿಗೆ ಮಜೂರಿ ಎಷ್ಟೆಂದೇ ಗೊತ್ತಿಲ್ಲದವರು, ಬೀಡಿ ಕಟ್ಟಿ ಕುಟುಂಬ ನಡೆಸುವ ಬಡವರನ್ನು ಉದ್ಧರಿಸುವುದು ಸಾಧ್ಯವೇ?” ಎಂದು ಮುನೀರ್ ಕಾಟಿಪಳ್ಳ ಲೇವಡಿ ಮಾಡಿದರು.
ಈ ಚುನಾವಣೆ ದುಡಿಯುವ ಜನರು ಹಾಗೂ ಶ್ರೀಮಂತ ವರ್ಗದ ನಡೆಯುತ್ತಿರುವ ಸಂಘರ್ಷವಾಗಿ ಮಾರ್ಪಟ್ಟಿದೆ. ಜಾತಿ ಧರ್ಮಗಳ ಹೆಸರಿನಲ್ಲಿ, ಕಪ್ಪು ಹಣವನ್ನು ಚೆಲ್ಲುತ್ತಾ, ನೈಜ ಸಮಸ್ಯೆಗಳನ್ನು ಮರೆಮಾಚಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹರಸಾಹಸ ಪಡುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಲ್ಲಿ ಯಾರೇ ಗೆದ್ದರೂ ಉದ್ಧಾರ ಆಗುವುದು ಶೇ.10ರಷ್ಟಿರುವ ಶ್ರೀಮಂತರು ಮಾತ್ರ. ಈ ಸತ್ಯವನ್ನರಿತು, ಶೇ.90ರಷ್ಟಿರುವ ಎಲ್ಲ ಸಮುದಾಯಗಳು ಒಂದಾಗಿ, ರಾಜಕೀಯ ಪ್ರಜ್ಞಾವಂತಿಕೆಯನ್ನು ತೋರಬೇಕು. ಶೇ.90ರಷ್ಟಿರುವ ದುಡಿಯುವ ಜನರ ಪರವಾಗಿರುವ ಸಿಪಿಐಎಂ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕೆಂದು ಮುನೀರ್ ಕಾಟಿಪಳ್ಳ ವಿನಂತಿಸಿದರು.
ವೇದಿಕೆಯಲ್ಲಿ ಮನಪಾ ಸದಸ್ಯ ದಯಾನಂದ ಶೆಟ್ಟಿ, ಬಿ.ಕೆ ಇಮ್ತಿಯಾಝ್, ಜನತಾದಳದ ಹಿರಿಯ ಮುಖಂಡ ಆನಂದ ಬಂಗೇರ, ಶ್ರೀನಾಥ್ ಕುಲಾಲ್, ನವಾಝ್ ಕುಳಾಯಿ ಮೊದಲಾದವರು ಉಪಸ್ಥಿತರಿದ್ದರು.