ಮಹಿಳಾ ಅಧಿಕಾರಿಯನ್ನು ಗುಂಡು ಹಾರಿಸಿ ಕೊಲೆಗೈದ ಗೆಸ್ಟ್ ಹೌಸ್ ಮಾಲಿಕ
ಶಿಮ್ಲಾ, ಮೇ 1: ಅಕ್ರಮವಾಗಿ ನಿರ್ಮಿಸಲಾದ ಹೋಟೆಲ್ ಕಟ್ಟಡವನ್ನು ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ತೆರವುಗೊಳಿಸಲು ತೆರಳಿದ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಗೆಸ್ಟ್ ಹೌಸ್ ಮಾಲಿಕ ಗುಂಡು ಹಾರಿಸಿ ಕೊಲೆಗೈದ ಘಟನೆ ಸೋಲನ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯಲ್ಲಿ ಸಹಾಯಕ ಪಟ್ಟಣ ಯೋಜನಾಧಿಕಾರಿ ಶೈಲ್ಬಾಲ ಮೃತಪಟ್ಟದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿ ಗುಲಾಬ್ ಸಿಂಗ್ ಗಾಯಗೊಂಡಿದ್ದಾರೆ.
ಸೋಲಾನ್ ನ ಕಾಸೌಲಿ ಮತ್ತು ಧರ್ಮಾಪುರ್ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾದ 13 ಹೋಟೆಲ್ ಕಟ್ಟಡಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಎ.17ರಂದು ಆದೇಶ ನೀಡಿತ್ತು. ಅದರಂತೆ ಶೈಲ್ಬಾಲ ಮತ್ತು ಗುಲಾಬ್ ಸಿಂಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದಾಗ ನಾರಾಯಣಿ ಗೆಸ್ಟ್ ಹೌಸ್ ಮಾಲಿಕ ವಿಜಯ್ ಕುಮಾರ್ ಎಂಬಾತನು ಅಧಿಕಾರಿಗಳಿಗೆ ಕಾರ್ಯಾಚರಣೆಗೆ ಅಡ್ಡಿಪಡಿಸಿ ಸಿಟ್ಟಿನಿಂದ ಅಧಿಕಾರಿಗಳತ್ತ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾದ ಎನ್ನಲಾಗಿದೆ.
ವಿಜಯ್ ಕುಮಾರ್ ಗುಂಡು ಹಾರಿಸಿದಾಗ ಶೈಲ್ಬಾಲ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಗುಲಾಬ್ ಸಿಂಗ್ ಚಂಡಿಗಡದ ಆಸ್ಪತ್ರೆಗೆ ದಾಖಲಾಗಿದ್ದಾರೆ.