“ಹತ್ತಿರ ನಿಂತಿದ್ದರು” ಎಂಬ ಕಾರಣಕ್ಕೆ ಯುವಕ-ಯುವತಿಯನ್ನು ಮೆಟ್ರೋದಿಂದ ಹೊರದಬ್ಬಿ ಥಳಿಸಿದರು

Update: 2018-05-01 16:54 GMT

ಕೊಲ್ಕತ್ತಾ, ಮೇ 1: “ಹತ್ತಿರ ನಿಂತಿದ್ದರು” ಎಂಬ ಕಾರಣಕ್ಕೆ ಮೆಟ್ರೋದಿಂದ ಜೋಡಿಯೊಂದನ್ನು ಹೊರದಬ್ಬಿದ ಗುಂಪೊಂದು ಅವರಿಗೆ ಸಾರ್ವಜನಿಕವಾಗಿ ಥಳಿಸಿದ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

ಈ ಘಟನೆಯ ಫೋಟೊ ಹಾಗು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲ್ಲೆಯಿಂದ ಯುವಕನನ್ನು ರಕ್ಷಿಸಲು ಯುವತಿ ಆತನಿಗೆ ಅಡ್ಡಲಾಗಿ ನಿಂತಿದ್ದಳು ಎನ್ನಲಾಗಿದೆ. ಆದರೂ ಗುಂಪಿನಲ್ಲಿದ್ದವರು ಯುವಕ ಹಾಗು ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಚಾಂದ್ ನಿ ಚೌಕ್ ದಿಂದ ಟರ್ಮಿನಲ್ ನೊಪಾರಾ ಸ್ಟೇಶನ್ ಗೆ ಯುವಕ ಹಾಗು ಯುವತಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಯುವಕ ಯುವತಿ ಜೊತೆಯಾಗಿ ಇದ್ದರು ಹೊರತು ಅಸಭ್ಯವಾಗಿ ವರ್ತಿಸುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಿರಿಯ ನಾಗರಿಕರೊಬ್ಬರು ತಗಾದೆ ತೆಗೆದಿದ್ದು, ಆ ಸಂದರ್ಭ ಗುಂಪೊಂದು, “ರೂಂ ಬುಕ್ ಮಾಡಿ”, “ಕ್ಲಬ್ ಗೆ ಹೋಗಿ” ಎಂದೆಲ್ಲಾ ಬೊಬ್ಬಿಡಲಾರಂಭಿಸಿತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಸ್ಟೇಶನ್ ತಲುಪಿದಾಗ ಜೋಡಿಯನ್ನು ಮೆಟ್ರೋದಿಂದ ಹೊರದಬ್ಬಿ ಥಳಿಸಲಾಯಿತು ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಫೋಟೊ ವೈರಲ್ ಆಗುತ್ತಲೇ ಅನೈತಿಕ ಪೊಲೀಸ್ ಗಿರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೊಲ್ಕತ್ತಾದ ಹಲವು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಮೆಟ್ರೋ ಸ್ಟೇಶನ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News