ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ 5ರ ಸಂಭ್ರಮ
ಬಂಟ್ವಾಳ, ಮೇ 1: ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯು ಆರೋಗ್ಯ ಸೇವೆಯಲ್ಲಿ ಸಾರ್ಥಕ 5ನೆ ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪಂಚವಾರ್ಷಿಕ ಸಂಭ್ರಮ ಹಾಗೂ ಸಾರ್ವಜನಿಕ ಸಮಾರೋಪ ಸಮಾರಂಭ ಮಂಗಳವಾರ ರಾತ್ರಿ ಆಸ್ಪತ್ರೆಯ ವಠಾರದಲ್ಲಿ ನಡೆಯಿತು.
ಮಂಗಳೂರು ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯು ಐದು ವರ್ಷದ ಕೂಸಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ಕಳೆದ ವರ್ಷ 64 ಲಕ್ಷ ಜನರಿಗೆ ಉಚಿತ ಹೆಲ್ತ್ ಕೇರ್ ಸೌಲಭ್ಯವನ್ನು ನೀಡುವಲ್ಲಿ ಯಶಸ್ವಿಯಾಗಿದ್ದು, ಇದಕ್ಕಾಗಿ ಒಟ್ಟು 37 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಸಂಸ್ಥೆಯ ಸೇವೆ ಅವಿರತವಾಗಿ ಇನ್ನಷ್ಟು ಬೆಳೆಯಲಿ ಎಂದು ಶುಭಹಾರೈಸಿದರು.
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಯು. ಎಂ. ಭೂಶಿ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಿ, ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಯ ಆರೋಗ್ಯ ಸೇವೆ ಮನೆ ಮಾತಾಗಿದ್ದು, ಈ ಆಸ್ಪತ್ರೆಯ ಮಾನವೀಯ ಸೇವೆ ಶ್ಲಾಘನೀಯ ಎಂದರು.
ವರ್ಷಾಚರಣೆ ಅಂಗವಾಗಿ ಅಂದು ಬೆಳಿಗ್ಗೆ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಉಚಿತ ಶಿಬಿರ, ಉಚಿತ ಕನ್ನಡಕ ವಿತರಣೆ ಹಾಗೂ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಶಿಬಿರದಲ್ಲಿ ಸುಮಾರು 750 ಮಂದಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರುಡಾಲ್ಫ್ ರವಿ ಡೆಸಾ, ತೆರೆಸಾ ಪೆರೆರಾ ಹಾಗೂ ಡಾ.ಕಿರಣ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್‌ನ ಮುಖ್ಯಸ್ಥ ಲೋಕನಾಥ ಶೆಟ್ಟಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ "ಫಾದರ್ ಆರ್ಟ್ ತುಂಬೆ" ವಿಶೇಷ ಸಂಚಿಕೆಯ 5ನೆ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು. ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯ ವಿಶೇಷ ಆರೋಗ್ಯ ಕಾರ್ಡ್ ಯೋಜನೆಯನ್ನು ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರೋಶನ್ ಕ್ರಾಸ್ತ ಉಪಸ್ಥಿತರಿದ್ದರು. ತುಂಬೆ, ಕಂಕನಾಡಿ ಹಾಗೂ ದೇರಳಕಟ್ಟೆಯ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು. ಆಸ್ಪತ್ರೆಯ ನಿರ್ದೇಶಕ ಫಾ. ರಿಚರ್ಡ್ ಆಲೋಶಿಯಸ್ ಕುವೆಲ್ಹೊ ಸ್ವಾಗತಿಸಿ, ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಶೆಟ್ಟಿ ವಂದಿಸಿದರು. ನಿಶಾ ಲೋಬೊ ಕಾರ್ಯಕ್ರಮ ನಿರೂಪಿಸಿದರು.