×
Ad

ಮಠಕ್ಕೆ ಬರಲು ಪ್ರಧಾನಿಗೆ ಪೇಜಾವರಶ್ರೀ ಪತ್ರ

Update: 2018-05-02 21:49 IST

ಉಡುಪಿ, ಮೇ 2: ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಬಂದೂ ಕೃಷ್ಣ ಮಠಕ್ಕೆ ಬರುವುದಿಲ್ಲ ಎಂದು ತಿಳಿದಾಗ ಅಸಮಧಾನಗೊಂಡ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಸೋಮವಾರವೇ ಈ ಬಗ್ಗೆ ಪ್ರಧಾನಿಗೆ ಪತ್ರವೊಂದನ್ನು ಬರೆದು, ಚುನಾವಣೆಯ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಬರುವಂತೆ ಸಲಹೆ ನೀಡಿದ್ದರೆಂದು ಹೇಳಲಾಗಿದೆ.

ಆದರೂ ನಿನ್ನೆ ಚುನಾವಣಾ ಪ್ರಚಾರ ಭಾಷಣಕ್ಕಾಗಿ ಉಡುಪಿಯ ಎಂಜಿಎಂ ಕಾಲೇಜು ಮೈದಾನಕ್ಕೆ ಆಗಮಿಸಿದ್ದ ಪ್ರಧಾನಿ, ಅತೀ ಸಮೀಪದಲ್ಲೇ ಇದ್ದ ಮಠಕ್ಕೆ ಬಾರದೇ ತೆರಳಿದ್ದರು. ಹಿಂದೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಉಡುಪಿಗೆ ಬಂದರೂ ಕೃಷ್ಣ ಮಠಕ್ಕೆ ಬಾರದೇ ಇದ್ದುದನ್ನು ಬಿಜೆಪಿ ಬಲವಾಗಿ ಆಕ್ಷೇಪಿಸಿ ಅವರ ವಿರುದ್ಧ ಪ್ರಚಾರಕ್ಕೆ ಬಳಸಿಕೊಂಡಿತ್ತು.

ಪ್ರಧಾನಿಗೆ ಪತ್ರ ಬರೆದಿರುವ ವಿಷಯವನ್ನು ನಿನ್ನೆ ಪೇಜಾವರ ಶ್ರೀಗಳು ಸುದ್ದಿಗಾರರೊಂದಿಗೆ ಮಾತಾಡುತ್ತಾ ಖಚಿತ ಪಡಿಸಿದರು. ‘ಉಡುಪಿಗೆ ಬಂದ ಪ್ರಧಾನಿ ಮೋದಿ ಮಠಕ್ಕೆ ಬರಬೇಕೆಂದು ಪತ್ರ ಬರೆದಿದ್ದೆ. ಆದರೆ ನಮ್ಮಲ್ಲಿಗೆ ಬರಲಿಲ್ಲ ಎಂದು ಬೇಸರವಿಲ್ಲ. ಮುಂದೊಂದು ದಿನ ಧಾರ್ಮಿಕ ಕಾರ್ಯಕ್ರಮ ನಿಗದಿ ಪಡಿಸಿ ಆಹ್ವಾನ ನೀಡುತ್ತೇವೆ’ ಎಂದು ಹೇಳಿದರು.

‘ನಮ್ಮ ಪರ್ಯಾಯ ಸಂದರ್ಭದಲ್ಲೂ ಪ್ರಧಾನಿ ಮೋದಿಗೆ ಹಲವಾರು ಬಾರಿ ಆಹ್ವಾನ ನೀಡಲಾಗಿತ್ತು. ಆಗಲೂ ಕೃಷ್ಣಮಠಕ್ಕೆ ಬಂದಿರಲಿಲ. ಆಗ ಬಂದಿರಲಿಲ್ಲ ಎಂದು ಬೇಸರವಿಲ್ಲ. ಈ ಬಾರಿಯಾದರೂ ಮಠಕ್ಕೆ ಬರುವಂತೆ ಪತ್ರ ಬರೆದಿದ್ದೆ.’ ಎಂದರು.

ಪತ್ರ ಓದಿ ನಮ್ಮ ಆಪ್ತ ಕಾರ್ಯದರ್ಶಿಗೆ ಪ್ರಧಾನಿಯವರ ಕಾರ್ಯದರ್ಶಿ ಕರೆ ಮಾಡಿ ಮಾತನಾಡಿದ್ದಾರೆ. ರಾಜಕೀಯ ಸಮಾವೇಶದ ನಡುವೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ. ಮುಂದೆ ಧಾರ್ಮಿಕ ಕಾರ್ಯಕ್ರಮವನ್ನು ನಿಗದಿ ಪಡಿಸಿ ಆಹ್ವಾನಿಸಿದರೆ ಬರುವುದಾಗಿ ಅವರು ತಿಳಿಸಿದ್ದಾರೆ ಎಂದು ಪೇಜಾವರ ಶ್ರೀ ನುಡಿದರು. ಅದರಂತೆ ಮುಂದೆ ಪ್ರಧಾನಿ ಬರುವ ಕಾರ್ಯಕ್ರಮದ ವೇಳೆ ಮಠದ ಭೇಟಿಯನ್ನು ನಿಗದಿ ಪಡಿಸುವುದಾಗಿ ಹೇಳಿದರು.

ಈಗ ಮೋದಿ ಬಾರದಿದ್ದರೆ ಬಿಜೆಪಿಯ ಮೇಲೆ ಕಳಂಕ ಬರುತ್ತದೆ. ಆದ್ದರಿಂದ ಮೋದಿ ಅವರು ಕೃಷ್ಣ ಮಠಕ್ಕೆ ಭೇಟಿ ನೀಡಬೇಕು. ಮೋದಿ ಕೃಷ್ಣ ಮಠಕ್ಕೆ ಬಂದರೆ ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗೆ ಸಹಾಯಕ ವಾಗುತ್ತದೆ ಎಂದು ಪತ್ರದಲ್ಲಿ ಬರೆದಿದ್ದರೆಂದು ಹೇಳಲಾಗಿದೆ. ಉಡುಪಿಯ ಕೃಷ್ಣ ಕೂಡ ಮೋದಿ ಅವರ ಗುಜರಾತ್‌ನ ದ್ವಾರಕೆಯಿಂದಲೇ ಉಡುಪಿಗೆ ಬಂದವ. ದ್ವಾರಕಾಧೀಶನೇ ಮೋದಿ ಕಡೆಗೆ ಇದ್ದರೆ ಬಿಜೆಪಿಯ ರಥ ವಿಜಯದತ್ತ ಸಾಗುತ್ತದೆ ಎಂದು ಹೇಳಿದ್ದರೆನ್ನಲಾಗಿದೆ.

ಪಲಿಮಾರು ಶ್ರೀಗೆ ಬೇಸರ: ಪ್ರಧಾನಿಯವರು ಮಠಕ್ಕೆ ಬರುವುದಾಗಿ ತಿಳಿಸಿಲ್ಲ. ಆದರೆ ಉಡುಪಿಗೆ ಬಂದು ಮಠಕ್ಕೆ ಬಾರದಿರುವುದರಿಂದ ಸ್ವಲ್ಪ ಬೇಸರವಾಗಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀ ಹೇಳಿದ್ದಾರೆ.

ಸ್ಥಳೀಯ ಬಿಜೆಪಿ ನಾಯಕರು ಪ್ರಧಾನಿ ಮೋದಿ ಮಠಕ್ಕೆ ಬರಬಹುದು ಎಂದು ಹೇಳಿದ್ದರು. ಹೀಗಾಗಿ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅವರು ಬರಲಿಲ್ಲ. ಮುಂದಿನ ದಿನಗಳಲ್ಲಿ ಅವರು ಬರಬಹುದು ಎಂದು ಶ್ರೀ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News