ದ್ವಿಚಕ್ರ ವಾಹನ, ಮೊಬೈಲ್ ಕಳವು: ಆರೋಪಿಗಳ ಸೆರೆ, ಸೊತ್ತು ವಶ
ಮಂಗಳೂರು, ಮೇ 2: ನಗರದ ವಿವಿಧೆಡೆ ದ್ವಿಚಕ್ರ ವಾಹನ ಹಾಗೂ ರಾತ್ರಿ ವೇಳೆ ಲಾರಿ ಚಾಲಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 2,05,000 ಮೌಲ್ಯದ ವಿವಿಧ ಮಾದರಿಯ 7 ದ್ವಿಚಕ್ರ ವಾಹನಗಳು ಹಾಗೂ ಸುಮಾರು 21,000 ರೂ. ಮೌಲ್ಯದ 6 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫರಂಗಿಪೇಟೆಯ ಪುದು ಗ್ರಾಮದ ಮುಹಮ್ಮದ್ ಸಾದಾತ್(20), ಪಡೀಲ್ ಕಣ್ಣೂರು ಗ್ರಾಮದ ಕುಂಡಾಲ್ ಹೌಸ್‌ನ ಮುಹಮ್ಮದ್ ರಾಝಿಕ್ ಯಾನೆ ರಾಝಿ (19), ಫರಂಗಿಪೇಟೆ ಜುಮಾದಿ ಗುಡ್ಡೆ ನಿವಾಸಿ ಸರ್ರಾಝ್ (25) ಬಂಧಿತ ಆರೋಪಿಗಳು.
ಆರೋಪಿಗಳು ಕದ್ದ ಬೈಕ್‌ಗಳನ್ನು ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ. ಅಲ್ಲದೆ ಲಾರಿ ಚಾಲಕರು ರಾತ್ರಿ ವೇಳೆ ಮಲಗಿದ್ದ ವೇಳೆ ಅವರ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.
ಆರೋಪಿ ಸಾದತ್ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಬೈಕ್ ಕಳ್ಳತನ ಪ್ರಕರಣ ದಾಖಲಾಗಿದೆ. ರಾಝಿಕ್ ವಿರುದ್ಧ ಕಂಕನಾಡಿ ಠಾಣೆ ಯಲ್ಲಿ, ಸರ್ರಾಝ್ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.