×
Ad

ಅನಂತ್ ಕುಮಾರ್ ಹೆಗಡೆ ಮಾತಿಗೆ ಕಡಿವಾಣ: ಪ್ರಧಾನಿಗೆ ಪತ್ರ

Update: 2018-05-03 18:35 IST

ಉಡುಪಿ, ಮೇ 3: ‘ಝಕಾತ್ ಹೆಸರಿನಲ್ಲಿ ಮಸೀದಿಗಳು ಕೋಟ್ಯಾಂತರ ರೂ. ಹಣ ಸಂಗ್ರಹಿಸಿ ಆ ಹಣದಿಂದ ಶಸ್ತ್ರಾಸ್ತ್ರ ಹಾಗೂ ಬಾಂಬ್ ಖರೀದಿಸುತ್ತದೆ’ ಎಂಬ ಹೇಳಿಕೆ ನೀಡಿ ಮುಸ್ಲಿಮರಿಗೆ ಅವಮಾನ ಮಾಡಿರುವ ಹಾಗೂ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟ ಮಾಡಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಒಂದು ವಾರದೊಳಗೆ ಮುಸ್ಲಿಮರಲ್ಲಿ ಕ್ಷಮೆ ಯಾಚಿಸಬೇಕು. ತಪ್ಪಿದ್ದಲ್ಲಿ ಅವರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ತಿಳಿಸಿದ್ದಾರೆ.

ಉಡುಪಿಯ ಸಮಸ್ತ ಮುಸ್ಲಿಂ ವತಿಯಿಂದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ಖಂಡಿಸಿ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡುತಿದ್ದರು.

ಮುಸ್ಲಿಮರಲ್ಲಿ ಕಲೀಮಾ, ನಮಾಝ್, ರಮಝಾನ್, ಝಕಾತ್, ಹಜ್ ಎನ್ನುವ 5 ಕಡ್ಡಾಯ ನಿಯಮಗಳಿದ್ದು ಇದರ ಅರಿವಿಲ್ಲದ ಸಚಿವರು ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಇಸ್ಲಾಂ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯದೇ ಬೇಕಾಬಿಟ್ಟಿ ಮಾತನಾಡುವ ಹೆಗಡೆ ಅವರಿಗೆ ಅವಶ್ಯವಿದ್ದರೆ ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ ನೀಡಲು ತಾವು ಸಿದ್ಧರಿರುವುದಾಗಿ ಅನ್ಸಾರ್ ಹೇಳಿದರು.

ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಸಚಿವರು ಧರ್ಮದ ಮೂಲವನ್ನೇ ಪ್ರಶ್ನಿಸುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಹೆಗಡೆ ಅವರ ಅಸಂಬದ್ಧ, ದ್ವೇಷಪೂರಿತ ಮಾತುಗಳಿಗೆ ಕಡಿವಾಣ ಹಾಕಬೇಕಿದೆ. ಒಂದು ವೇಳೆ ಹೆಗಡೆ ನಾಲಿಗೆಗೆ ಲಗಾಮ ಬೀಳದೇ ಹೋದರೆ ಸಮಸ್ತ ಮುಸ್ಲಿಂಮರು ಸಿಡಿದೇಳುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.

ಸಚಿವ ಹೆಗಡೆ ಅವರ ನಾಲಿಗೆಗೆ ನಿಯಂತ್ರಣ ಹೇರಿ ಸಮಾಜದ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ಪ್ರಧಾನಿ ಕೂಡಲೇ ಮಧ್ಯ ಪ್ರವೇಶಿಸಿ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಅನ್ಸಾರ್ ಹೇಳಿದರು.

ಇತ್ತೀಚೆಗೆ ಖಾಸಗಿ ಟಿವಿ ಚಾನೆಲ್ ಒಂದರಲ್ಲಿ ತಿರುಪತಿ ತಿಮ್ಮಪ್ಪನ ನಾಮವನ್ನು ಅಶ್ಲೀಲವಾಗಿ ಹೋಲಿಸಿ, ಅವಮಾನ ಮಾಡಿರುವ ವ್ಯಕ್ತಿಯ ನಡೆಯನ್ನು ಖಂಡಿಸುತ್ತೇವೆ. ತಮ್ಮ ಧರ್ಮವನ್ನು ಗೌರವಿಸುವಂತೆ ಇತರ ಧರ್ಮಗಳನ್ನು ಸಮಾನವಾಗಿ ಗೌರವಿಸುವುದೇ ನಿಜವಾದ ಮನುಷ್ಯ ಧರ್ಮ ಎಂದವರು ತಿಳಿಸಿದರು. ಪ್ರಮುಖರಾದ ಜುನೈದ್, ಸಂಶುದ್ದೀನ್, ಆಸಿಫ್, ಇರ್ಷಾದ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News