×
Ad

ನನ್ನ ಸ್ಪರ್ಧೆಯಿಂದ ಮೊಯ್ದಿನ್ ಬಾವಾರಿಗೆ ನಡುಕ: ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ

Update: 2018-05-03 18:48 IST
ಮುನೀರ್ ಕಾಟಿಪಳ್ಳ

ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಣಕ್ಕೆ ಇಳಿದಿದ್ದಾರೆ. ದ.ಕ. ಜಿಲ್ಲೆಯ ಮತೀಯ ಸೂಕ್ಷ್ಮ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಮುನೀರ್ ಕಾಟಿಪಳ್ಳ ಅವರ ಸ್ಪರ್ಧೆಯಿಂದ ಜಿಲ್ಲೆಯ ಗಮನ ಸೆಳೆದಿದೆ. ನಾಡಿನ ಬಹುಮುಖ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ಹೋರಾಟ, ಚಳವಳಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮುನೀರ್ ಪರ ಸಿಪಿಎಂ ಕಾರ್ಯಕರ್ತರು, ಬೆಂಬಲಿಗರು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮುನೀರ್ ಕಾಟಿಪಳ್ಳ ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ವಾರ್ತಾಭಾರತಿ: ಪ್ರಚಾರ ಕಾರ್ಯ ಹೇಗಿವೆ ?

ಮುನೀರ್ ಕಾಟಿಪಳ್ಳ: ಬಿರುಸಿನಿಂದ ಸಾಗುತ್ತಿದೆ. ಬೆಳಗ್ಗೆ 7ಕ್ಕೆ ಮನೆಯಿಂದ ಹೊರಟರೆ ರಾತ್ರಿ 11ಕ್ಕೆ ಮನೆ ತಲುಪುತ್ತೇನೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮನೆ ಮನೆ ಭೇಟಿ, ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡುತ್ತೇನೆ. ಮಧ್ಯಾಹ್ನದ ಬಳಿಕ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಈ ಮಧ್ಯೆ ಪರಿಚಯಸ್ಥ ಮತದಾರರಿಗೆ ಫೋನ್ ಕರೆ ಮಾಡುತ್ತೇನೆ. ಅಂದಹಾಗೆ, ಚುನಾವಣೆ ಘೋಷಣೆಗೆ ಮುನ್ನವೇ ನಾವೊಂದು ಸುತ್ತು ಪ್ರಚಾರ ನಡೆಸಿದ್ದೆವು. ಆ ಬಳಿಕ ಎರಡನೆ ಸುತ್ತಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇವೆ. ಎರಡನೆ ಸುತ್ತಿನಲ್ಲಿ ಶೇ.60ರಷ್ಟು ವ್ಯಾಪ್ತಿ ಪ್ರದೇಶದ ಮತದಾರರನ್ನು ತಲುಪಿದ್ದೇನೆ. ಇನ್ನುಳಿದ ಪ್ರದೇಶವನ್ನು ವಾರದೊಳಗೆ ತಲುಪುವ ನಿರೀಕ್ಷೆ ಇದೆ.

ಮತದಾರರ ಪ್ರತಿಕ್ರಿಯೆ ಹೇಗಿವೆ ?

ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೋದಲ್ಲೆಲ್ಲಾ ಜನರು ‘ನೀನೇ ಈ ಕ್ಷೇತ್ರದ ಜನಪ್ರತಿನಿಧಿ’ಯಾಗಬೇಕು ಎಂದು ಆಶಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರೀತಿಯಿಂದ ಪಕ್ಷಕ್ಕೆ ದೇಣಿಗೆಯನ್ನೂ ನೀಡುವವರೂ ಇದ್ದಾರೆ. ಅದರಲ್ಲಿ ಅಪರಿಚಿತರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ನಿಮಗೆ ಯಾವುದು ಧನಾತ್ಮಕ ಅಂಶವಾಗಿ ಪರಿಣಮಿಸಲಿದೆ ?

ಎಂಆರ್‌ಪಿಎಲ್ ವಿರುದ್ಧದ ಹೋರಾಟ ನನಗೆ ಹೆಚ್ಚು ಧನಾತ್ಮಕವಾಗುತ್ತಿದೆ. ಅದಲ್ಲದೆ, ಕ್ಷೇತ್ರದ ಶಾಸಕರ ಕಾರ್ಯವೈಖರಿಯನ್ನು ಯಾವುದೇ ಮುಲಾಜಿಲ್ಲದೆ ಪ್ರಶ್ನಿಸಿದ್ದು ಕೂಡ ಮತದಾರರಿಗೆ ಹಿಡಿಸಿದೆ.

ನಿಮ್ಮ ಸ್ಪರ್ಧೆಯಿಂದ ಯಾರ ಹಾದಿ ಸುಗಮಗೊಳ್ಳಬಹುದು ?

ಈವರೆಗೆ ಇಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಮಾತ್ರ ನೇರ ಪೈಪೋಟಿ ಇತ್ತು. ಆದರೆ, ಈಗ ಹಾಗಲ್ಲ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿವೆ. ಶಾಸಕ ಮೊಯ್ದಿನ್ ಬಾವಾರಿಗಂತೂ ನನ್ನ ಸ್ಪರ್ಧೆ ನಡುಕ ಹುಟ್ಟಿಸಿದೆ. ಇನ್ನು ಬಿಜೆಪಿ ಅಭ್ಯರ್ಥಿ ಕೂಡ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುವಂತಾಗಿದೆ. ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಮತಗಳ ವಿಭಜನೆಯ ಲೆಕ್ಕಾಚಾರದಲ್ಲಿ ಹಾಯಾಗಿದ್ದರು. ಅಲ್ಪಸಂಖ್ಯಾತರ ಮತಗಳು ತನಗೆ ನಿಶ್ಚಿತ ಎಂದು ಕಾಂಗ್ರೆಸ್ ಮತ್ತು ಹಿಂದುತ್ವವಾದಿಗಳ ಮತಗಳು ತನಗೆ ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿಗಳು ಭಾವಿಸಿದ್ದರು. ನನ್ನ ಸ್ಪರ್ಧೆ ಅವರ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. ಕೋಮುಧ್ರುವೀಕರಣದ ಬದಲು ಶೇ.90ರಷ್ಟು ಬಡವರ ಮತ್ತು ಶೇ.10ರಷ್ಟು ಶ್ರೀಮಂತರ ನಡುವಿನ ಸ್ಪರ್ಧೆ ಎಂಬುದು ಖಚಿತವಾಗಿದೆ. ಹಾಗಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಹೆಚ್ಚೆಚ್ಚು ಹಣ ವ್ಯಯಿಸುವಂತಾಗಿದೆ. ರಾತ್ರಿ-ಹಗಲೆನ್ನದೆ ಶ್ರಮಿಸುವಂತಾಗಿದೆ.

ನಿಮ್ಮ ವಿರುದ್ಧವೂ ಪ್ರಚಾರ ಬಿರುಸಾಗಿದೆಯಲ್ಲಾ ?

ಕೇವಲ ಪ್ರಚಾರ ಮಾತ್ರವಲ್ಲ, ಅಪಪ್ರಚಾರವೂ ನಡೆಯುತ್ತಿದೆ. ಮುನೀರ್ ಕಾಟಿಪಳ್ಳ ಕಣದಿಂದ ಹಿಂದಕ್ಕೆ ಸರಿದಿದ್ದಾರೆ, ಮುನೀರ್‌ಗೆ ಮತ ಹಾಕಿದರೆ ಬಿಜೆಪಿಯ ಗೆಲುವಿಗೆ ಅವಕಾಶ ಮಾಡಿಕೊಟ್ಟಂತೆ ಎಂದೆಲ್ಲಾ ಹೇಳಿ ಮತದಾರರಲ್ಲಿ ಗೊಂದಲ ಸೃಷ್ಟಿಸಲಾಗುತ್ತದೆ. ಆದರೆ ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಹೋರಾಟ, ಚಳುವಳಿಯು ನನಗೆ ಸಾಕಷ್ಟು ಪಾಠ ಕಲಿಸಿವೆ. ಅದನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುವೆ.

ಕ್ಷೇತ್ರದಲ್ಲಿ ‘ನೋಟಾ’ ಚಲಾವಣೆಯಾಗದೇ ?

ಆರಂಭದಲ್ಲಿ ಅಂತಹ ಮಾತುಗಳು ಕೇಳಿಬರುತ್ತಿತ್ತು. ನಮಗೆ ಕಾಂಗ್ರೆಸ್ಸೂ ಬೇಡ, ಬಿಜೆಪಿಯೂ ಬೇಡ ಎಂಬ ಮಾತುಗಳನ್ನು ಜನರಾಡಿಕೊಳ್ಳುತ್ತಿದ್ದರು. ಅಲ್ಲದೆ ನೋಟಾ ಚಲಾಯಿಸುವುದಾಗಿ ಹೇಳುತ್ತಿದ್ದರು. ಇದೀಗ ಮತದಾರರು ಆ ಮಾತುಗಳಿಂದ ಹಿಂದೆ ಸರಿದಿದ್ದಾರೆ. ಅಭ್ಯರ್ಥಿಯಾಗಲು ನೀನೇ ಸಮರ್ಥ. ಹಾಗಾಗಿ ನೋಟಾ ಚಲಾವಣೆ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಇದೆಲ್ಲಾ ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News