ಬಿಜೆಪಿಗರು ಕಳೆದ 35ವರ್ಷಗಳಿಂದ ರಾಮನ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ: ಆರ್.ವಿ.ಡಿ
ಭಟ್ಕಳ, ಮೇ 3: ಬಿಜೆಪಿಯವರು ಯಾವಾಗಲೂ ಸತ್ಯಕ್ಕೆ ದೂರವಾದ ಮಾತನ್ನೇ ಆಡುತ್ತಾರೆ. ಕಳೆದ 35 ವರ್ಷಗಳಿಂದ ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿಗರು ಇನ್ನೂ ತನಕ ರಾಮಮಂದಿರ ಕಟ್ಟದೆ ಜನರ ಮನಸ್ಸಿನಲ್ಲಿ ಹಿಂದುತ್ವದ ಹಾಗೂ ರಾಮಮಂದಿರದ ಪೊಳ್ಳು ಆಶ್ವಾಸನೆ ನೀಡುತ್ತಾ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ. ದೇಶಪಾಂಡೆ ತಿಳಿಸಿದರು.
ಅವರು ಗುರುವಾರ ಬೆಂಗ್ರೆಯಲ್ಲಿ ಪಕ್ಷದ ಅಭ್ಯರ್ಥಿ ಶಾಸಕ ಮಂಕಾಳ ವೈದ್ಯ ಪರ ಮತ ಪ್ರಚಾರ ಮಾಡುತ್ತಾ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿದ್ದ ಸಿದ್ದು ಸರ್ಕಾರ ಹಲವಾರು ಯೋಜನಗಳ ಮೂಲಕ ಬಡವರ ನಿರ್ಗತಿಕರ, ಹಿಂದುಳಿದ ವರ್ಗದವರ ಹಾಗೂ ಅಲ್ಪಸಂಖ್ಯಾತರ ಅಭಿವೃದ್ದಿಗೆ ಶ್ರಮಿಸಿದೆ. ರಾಜ್ಯದ ರೈತರು ಸಂಕಷ್ಠದಲ್ಲಿದ್ದಾಗ ನೆರವಿಗೆ ಬರಬೇಕಾದ ಮೋದಿ ಸರ್ಕಾರ ಕೈಚೆಲ್ಲಿಕೂತಾಗ ನಮ್ಮ ಸರ್ಕಾರ 8 ಸಾವಿರ ಕೋಟಿ ಸಾಲಮನ್ನಾ ಮಾಡಿದೆ ಎಂದು ತಿಳಿಸಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆಂದು ಹೇಳಿದ ಮೋದಿಗೆ ಇಂದು ವರ್ಷಕ್ಕೆ 20 ಲಕ್ಷ ಉದ್ಯೋಗ ಸೃಷ್ಠಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಜಿಲ್ಲಾ ಲೋಕಸಭಾ ಸದಸ್ಯರು ಸಂವಿಧಾನ ಬದಲಾಯಿಸುತ್ತೇನೆ ಎಂದು ತಿಳಿಸಿ ದೇಶದಲ್ಲಿ ಅಲ್ಲೊಲ್ಲ ಕಲ್ಲೊಲ ಸೃಷ್ಠಿಸಿ ಕೊನೆಗೆ ತಾವೇ ಲೋಕಸಭೆಯಲ್ಲಿ ಕ್ಷಮೆ ಯಾಚಿಸಿದ್ದಾರೆ ಇಂತಹ ನಾಯಕರು ಇನ್ನೂ ಎಂತಹ ಅಭಿವೃದ್ದಿ ಕಾರ್ಯ ಮಾಡುವರು ಎಂದು ಪ್ರಶ್ನಿಸಿದರು. ನಮ್ಮ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ನಾವು ಚುಣಾವಣೆ ನಿಲ್ಲುವ ಪೂರ್ವ ಘೋಷಿಸಿದ ಎಲ್ಲಾ ಭರವಸೆಗಳನ್ನು ಅನುಷಾನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ಭಟ್ಕಳ ತಾಲೂಕಿನ ತಾಲೂಕಿನ ಶಾಸಕರಾದ ಮಂಕಾಳ ವೈದ್ಯರವರು ಸಜ್ಜನ ರಾಜಕಾರಣಿಯಾಗಿದ್ದು, ಕ್ಷೇತ್ರದ ಅಭಿವೃದ್ದಿ ಹಗಲಿರುಳು ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಶಾಸಕ ತರದೇ ಇರುವ ಅನುದಾನವನು ತಂದು ಸೇತುವೆ, ರಸ್ತೆ ಸೇರಿದಂತೆ ಹಲವಾರು ಅಭೀವೃದ್ದಿ ಕಾರ್ಯ ಮಾಡಿದ್ದಾರೆ. ತನ್ನ ಮನೆಗೆ ಬಂದ ಯಾವೊಬ್ಬ ಕ್ಷೇತ್ರದ ಜನರನ್ನು ಬರಿಗೈಯಲ್ಲಿ ಕಳುಹಿಸಿದ ಶಾಸಕ ಎಲ್ಲರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಇಂತಹ ಶಾಸಕರಿಗೆ ಮುಂದಿನ ಭವಿಷ್ಯ ಉಜ್ವಲವಿದ್ದು, ತಾವೇಲ್ಲರೂ ಅವರಿಗೆ ಈ ಬಾರಿ ಗೆಲ್ಲಿಸಲು ಶ್ರಮವಹಿಸಬೇಕು ಎಂದು ತಿಳಿಸಿದರು.
ಭಟ್ಕಳ ಶಾಸಕ ಮಂಕಾಳ ವೈದ್ಯ, ಜಿಪಂ ಸದಸ್ಯ ದೀಪಕ ನಾಯ್ಕ, ತಾಪಂ ಸದಸ್ಯ ಮಹಾಬಲೇಶ್ವರ ನಾಯ್ಕ, ವಿಷ್ಣು ದೇವಾಡಿಗ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.