ಛೋಟಾ ರಾಜನ್ ನ ಫೋನ್ ಕರೆಯೇ ಆತನಿಗೆ ಮುಳುವಾಗಿದ್ದು ಹೇಗೆ ಗೊತ್ತಾ ?
ಮುಂಬೈ, ಮೇ 3: ಕ್ರಿಮಿನಲ್‌ಗಳಲ್ಲಿ ಪ್ರಚಾರ ಪಡೆಯುವ ಬಯಕೆ ತೀವ್ರವಾಗಿರುತ್ತದೆ ಎಂದು ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಪಾತಕಿ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವ ವಿಶೇಷ ‘ಮೋಕ’ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪತ್ರಕರ್ತ ಜೆ ಡೇಯನ್ನು ತಾನೇ ಕೊಲೆ ಮಾಡಿಸಿದ್ದೆ ಎಂದು ರಾಜನ್ ಕೆಲವು ಪತ್ರಕರ್ತರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದ. ಈ ಹೇಳಿಕೆಯೇ ಅಂತಿಮವಾಗಿ ರಾಜನ್‌ಗೆ ಮುಳುವಾಗಿ ಪರಿಣಮಿಸಿದ್ದು ಆತನ ಅಪರಾಧವನ್ನು ಸಾಬೀತುಪಡಿಸಿದೆ.
ಆದರೆ ಕೇವಲ ಫೋನ್ ಕರೆಯ ಆಧಾರದ ಮೇಲೆ ಓರ್ವನ ಅಪರಾಧ ಸಾಬೀತುಗೊಳ್ಳುತ್ತದೆಯೇ ಎಂದು ತೀರ್ಪು ಪ್ರಕಟವಾದ ಬಳಿಕ ಕೆಲವು ವಕೀಲರು ಪ್ರಶ್ನೆ ಮುಂದಿರಿಸಿದ್ದರು. ಇದಕ್ಕೆ ವಿಶೇಷ ‘ಮೋಕ’ ನ್ಯಾಯಾಲಯದ ನ್ಯಾಯಾಧೀಶ ಅಡ್ಕರ್ ತಮ್ಮ 599 ಪುಟಗಳ ತೀರ್ಪಿನಲ್ಲಿ ಸುದೀರ್ಘವಾಗಿ ಉತ್ತರಿಸಿದ್ದಾರೆ.
ಭೂಗತ ಲೋಕದಲ್ಲಿ ರಾಜನ್ ಕ್ರಮೇಣ ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ಬಗ್ಗೆ ಪತ್ರಕರ್ತ ಜೇ ಡೇ ತಮ್ಮ ಲೇಖನದಲ್ಲಿ ಬರೆದಿದ್ದರು. ಇದರಿಂದ ರಾಜನ್ ಕಿರಿಕಿರಿಗೊಂಡಿದ್ದ . ಆದ್ದರಿಂದಲೇ ಡೇ ಹತ್ಯೆಯಾದ ಬಳಿಕ ಕೆಲವು ಪತ್ರಕರ್ತರಿಗೆ ಕರೆ ಮಾಡಿದ್ದ ರಾಜನ್ ಹತ್ಯೆಯನ್ನು ತಾನೇ ಮಾಡಿಸಿದ್ದಾಗಿ ತಿಳಿಸಿದ್ದ. ತನ್ನ ಬಲವನ್ನು ತೋರಿಸುವುದು ಹಾಗೂ ಇತರರಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ಉದ್ದೇಶದಿಂದ ರಾಜನ್ ಹೀಗೆ ಮಾಡಿದ್ದ. ಇತರರ ಗಮನ ಸೆಳೆಯಲು ಅಪರಾಧಿಗಳು ಹೀಗೆ ಮಾಡುತ್ತಾರೆ. ತಮ್ಮನ್ನು ನಿರ್ಲಕ್ಷಿಸುವಂತಿಲ್ಲ ಎಂಬ ಸಂದೇಶ ಸಾರುವ ಉದ್ದೇಶ ಇಂತಹ ಕೃತ್ಯಗಳ ಹಿಂದೆ ಇರುತ್ತದೆ. ಅಲ್ಲದೆ ತಮ್ಮ ಬೆಂಬಲಿಗರ ಎದುರು ಪ್ರತಿಷ್ಟೆ ಉಳಿಸಿಕೊಳ್ಳಲು ಹೀಗೆ ಮಾಡುತ್ತಾರೆ.
ಕ್ರಿಮಿನಲ್‌ಗಳಿಗೆ ಪ್ರಚಾರದ ಬಯಕೆ ಇರುತ್ತದೆ. ಯಾವುದೇ ಜಾಹೀರಾತು ನೀಡದೆ ಪತ್ರಿಕೆಗಳಲ್ಲಿ ಪ್ರಚಾರ ಪಡೆಯುವ ಉದ್ದೇಶದಿಂದ ಕ್ರಿಮಿನಲ್‌ಗಳು ಮಾಧ್ಯಮ ಸಂಸ್ಥೆಗಳಿಗೆ, ಪತ್ರಕರ್ತರಿಗೆ ಕರೆ ಮಾಡುತ್ತಾರೆ . ತಾನು ಭೂಗತನಾಗಿರುವ ಕಾರಣ ತನ್ನನ್ನು ಯಾರೂ ಬಂಧಿಸಲೂ ಸಾಧ್ಯವಿಲ್ಲ ಎಂದು ಕ್ರಿಮಿನಲ್‌ಗಳು ನಂಬಿರುತ್ತಾರೆ. ಕೆಲವರು ತಮ್ಮನ್ನು ಕ್ರಿಮಿನಲ್‌ಗಳು ಎಂದು ಕರೆಸಿಕೊಳ್ಳಲು ಇಚ್ಚಿಸುವುದಿಲ್ಲ. ವ್ಯವಸ್ಥೆಯಲ್ಲಿರುವ ದೋಷವನ್ನು ವಿರೋಧಿಸುವವರು ತಾವೆಂಬ ಮನೋಭಾವ ಇಂತವರಲ್ಲಿರುತ್ತದೆ ಎಂದು ನ್ಯಾ. ಸಮೀರ್ ಅಡ್ಕರ್ ಹೇಳಿದ್ದಾರೆ.
ರಾಜನ್ ಮತ್ತು ಆತನ ಗ್ಯಾಂಗ್‌ನ ಬಗ್ಗೆ ಸರಣಿ ಲೇಖನಗಳನ್ನು ಜೇ ಡೆ ಬರೆದಿದ್ದರು. ಅವರ ಕೊಲೆ ನಡೆದ ಬಳಿಕ ರಾಜನ್ ಸುದ್ದಿಸಂಸ್ಥೆಗಳಿಗೆ ಕರೆ ಮಾಡಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ. ಮಾಧ್ಯಮಗಳು ತನಗೆ ವಿರುದ್ಧವಾಗಿ ಇನ್ನು ಬರೆಯಬಾರದು ಅಥವಾ ಸುದ್ದಿ ಪ್ರಸಾರ ಮಾಡಬಾರದು ಎಂದು ಎಚ್ಚರಿಕೆ ನೀಡಲೆಂದು ರಾಜನ್ ಈ ಕರೆ ಮಾಡಿದ್ದ. ಆದರೆ ಅಂತಿಮವಾಗಿ ಈ ಕರೆಯೇ ರಾಜನ್‌ನ ಅಪರಾಧಕ್ಕೆ ಪುರಾವೆಯಾಗಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ನ್ಯಾಯಾಧೀಶ ಸಮೀರ್ ಅಡ್ಕರ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.