ಅಸಾರಾಂಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದ ನ್ಯಾಯಾಧೀಶರ ವರ್ಗಾವಣೆ
ಹೊಸದಿಲ್ಲಿ, ಮೇ.3: ಸ್ವಯಂಘೋಷಿತ ದೇವಮಾನವ ಅಸಾರಾಂನನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆಗೊಳಪಡಿಸಿದ್ದ ನ್ಯಾಯಾಧೀಶ ಮಧುಸೂದನ್ ಶರ್ಮಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಜೈಪುರದಲ್ಲಿ ಕಾನೂನು ಮತ್ತು ನ್ಯಾಯಿಕ ವ್ಯವಹಾರ ಇಲಾಖೆಯ ಜಂಟಿ ಕಾರ್ಯದರ್ಶಿ (ಕಾನೂನು)ಯಾಗಿ ನೇಮಕ ಮಾಡಲಾಗಿದೆ.
ರಾಜಸ್ಥಾನ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಹೊರಡಿಸಿರುವ ಎರಡು ಪ್ರತ್ಯೇಕ ಆದೇಶಗಳಲ್ಲಿ ಜಿಲ್ಲಾ ನ್ಯಾಯಾಧೀಶ ಮಟ್ಟದ ಐದು ನ್ಯಾಯಿಕ ಅಧಿಕಾರಿಗಳು ಮತ್ತು ಒಂಬತ್ತು ಇತರ ನ್ಯಾಯಿಕ ಅಧಿಕಾರಿಗಳನ್ನು ಬುಧವಾರ ವರ್ಗಾಯಿಸಲಾಗಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಜೋಧ್‌ಪುರ ಮೆಟ್ರೊಪೊಲಿಟನ್‌ನ ವಿಶೇಷ ಎಸ್ಸಿ/ಎಸ್ಟಿ ಪ್ರಕರಣಗಳ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಶರ್ಮಾ, ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಅಪಾಯವಿದ್ದ ಕಾರಣ ಸ್ವಯಂಘೋಷಿತ ದೇವಮಾನವ ಅಸಾರಾಂಗೆ ಜೋಧ್‌ಪುರ ಕೇಂದ್ರ ಕಾರಾಗೃಹದ ಒಳಗೆಯೇ ಜೀವಾವಧಿ ಶಿಕ್ಷೆ ಘೋಷಿಸಿದ್ದರು. ಶಿಕ್ಷೆಯನ್ನು ಘೋಷಿಸಿದ ದಿನದಿಂದ ಶರ್ಮಾ ಅವರ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.