ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ:ಪ್ರಧಾನಿ ಮೋದಿ
ಹೊಸದಿಲ್ಲಿ,ಮೇ 3: ವಿಚಾರ ವೈವಿಧ್ಯ ಮತ್ತು ಮಾನವೀಯ ಅಭಿವ್ಯಕ್ತಿ ಒಂದು ಸಮಾಜವಾಗಿ ನಮ್ಮನ್ನು ಹೆಚ್ಚು ಸ್ಪಂದನಶೀಲರನ್ನಾಗಿಸುತ್ತದೆ ಹಾಗೂ ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಗುರುವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಮೋದಿ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವಾದ ಇಂದು ಪತ್ರಿಕಾ ಸ್ವಾತಂತ್ರವನ್ನು ಬೆಂಬಲಿಸಲು ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸೋಣ. ವಿಚಾರಗಳಲ್ಲಿಯ ವೈವಿಧ್ಯಗಳು ಮತ್ತು ಮಾನವೀಯ ಅಭಿವ್ಯಕ್ತಿಗಳು ಒಂದು ಸಮಾಜವಾಗಿ ನಮ್ಮನ್ನು ಹೆಚ್ಚು ಜೀವಂತವಾಗಿಸುತ್ತವೆ ಎಂದಿದ್ದಾರೆ.
ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ದಣಿವರಿಯದೆ ಶ್ರಮಿಸುತ್ತಿರುವ ಎಲ್ಲರನ್ನು ಪ್ರಶಂಸಿಸಿರುವ ಮೋದಿ,ಈ ಅಸಂಖ್ಯಾತ ಮಹಿಳೆಯರು ಮತ್ತು ಪುರುಷರಿಂದಾಗಿಯೇ ಪತ್ರಿಕಾ ಸ್ವಾತಂತ್ರ್ಯವು ತಲೆಯೆತ್ತಿ ನಿಂತಿದೆ. ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿರುವ ಪ್ರತಿಯೊಬ್ಬರ ಪಾತ್ರವನ್ನು ತಾನು ಪ್ರಶಂಸಿಸುತ್ತೇನೆ ಎಂದಿದ್ದಾರೆ.