349 ರೂ.ಗೆ ವಿಶೇಷ ಕೊಡುಗೆ ಘೋಷಿಸಿದ ಬಿಎಸ್ಸೆನ್ನೆಲ್
ಹೊಸದಿಲ್ಲಿ, ಮೇ.3: ಸರಕಾರಿ ಸ್ವಮ್ಯದ ದೂರವಾಣಿ ಸಂಸ್ಥೆ ಬಿಎಸ್ಸೆನೆಲ್ ಇತರ ಖಾಸಗಿ ಸಂಸ್ಥೆಗಳ ಜೊತೆ ಡೇಟಾ ಸಮರಕ್ಕೆ ಇಳಿದಿದ್ದು 349 ರೂ.ಗೆ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನಿಯಮಿತ ಉಚಿತ ಕರೆಯನ್ನು ನೀಡುತ್ತಿದೆ. ಇದೊಂದು ಪ್ರೀಪೇಯ್ಡ್ ಆಫರ್ ಆಗಿದ್ದು ಪ್ರತಿಸ್ಪರ್ಧಿ ಸಂಸ್ಥೆಗಳಾದ ರಿಲಾಯನ್ಸ್ ಜಿಯೊ, ಏರ್‌ಟೆಲ್, ವೊಡಾಫೋನ್ ಮಾದರಿಯಲ್ಲೇ ಬಿಎಸ್ಸೆನ್ನೆಲ್ ಕೂಡಾ ತನ್ನ ದರಪಟ್ಟಿಯನ್ನು ಪರಿಷ್ಕರಿಸಿದೆ.
ಆದರೆ ಸರಕಾರಿ ಸ್ವಾಮ್ಯದ ಸಂಸ್ಥೆ ಇನ್ನೂ 3ಜಿ ಸೇವೆಯನ್ನಷ್ಟೇ ಒದಗಿಸುತ್ತಿದ್ದು, 4ಜಿಗೆ ಬದಲಾವಣೆಗೊಂಡಿಲ್ಲ. ಇದು ಬಿಎಸ್ಸೆನ್ನೆಲ್ನ ಬಹುದೊಡ್ಡ ವೈಫಲ್ಯ ಎಂದೇ ತಿಳಿಯಲಾಗಿದೆ. ನೂತನ ಯೋಜನೆ ಪ್ರಕಾರ, 349 ರೂ.ಗೆ ಬಿಎಸ್ಸೆನ್ನೆಲ್ ಅನಿಯಮಿತ ಉಚಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತಿದೆ. ಆದರೆ ದಿಲ್ಲಿ ಮತ್ತು ಮುಂಬೈಯನ್ನು ಈ ಪ್ಲಾನ್‌ನಿಂದ ಹೊರಗಿಡಲಾಗಿದೆ. ಪ್ರತಿದಿನ ಗ್ರಾಹಕರಿಗೆ ಒಂದು ಜಿಬಿ ಡೇಟಾ ಸಿಗಲಿದ್ದು ಅದು ಮುಗಿದರೆ ಅಂತರ್ಜಾಲ ವೇಗವು 40ಕೆಬಿಪಿಎಸ್‌ಗೆ ಇಳಿಯಲಿದೆ. ಗ್ರಾಹಕರು ಪ್ರತಿದಿನ ನೂರು ಸಂದೇಶಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ. ಇತ್ತೀಚೆಗಷ್ಟೇ ಬಿಎಸ್ಸೆನೆಲ್ 99 ರೂ. ಹಾಗೂ 319 ರೂ.ನ ಎರಡು ಹೊಸ ಪ್ಲಾನ್‌ಗಳನ್ನು ಘೋಷಿಸಿತ್ತು. 99ರೂ. ಪ್ಲಾನ್ 26 ದಿನಗಳ ವ್ಯಾಲಿಡಿಟಿ ಹೊಂದಿದ್ದು ಅನಿಯಮಿತ ಕರೆ ಮಾಡಬಹುದಾಗಿದೆ. 319 ರೂ. ಪ್ಲಾನ್ 90 ದಿನಗಳ ವ್ಯಾಲಿಡಿಟಿ ಹೊಂದಿದ್ದು ದೇಶಾದ್ಯಂತ ಹಾಗೂ ರೋಮಿಂಗ್‌ನಲ್ಲಿ ಅನಿಯಮಿತ ಕರೆಗಳನ್ನು ಮಾಡುವ ಅವಕಾಶವನ್ನು ನೀಡುತ್ತದೆ. ಆದರೆ ಇಲ್ಲೂ ದಿಲ್ಲಿ ಮತ್ತು ಮುಂಬೈಯನ್ನು ಪ್ಲಾನ್‌ನಿಂದ ಹೊರಗಿಡಲಾಗಿದೆ.