ವಿದ್ಯುನ್ಮಾನ ವಿಲೋಮ ಹರಾಜಿಗೆ ರೈಲ್ವೆ ಒಲವು: ವಾರ್ಷಿಕ 20,000 ಕೋ.ರೂ.ಉಳಿತಾಯದ ನಿರೀಕ್ಷೆ

Update: 2018-05-03 15:39 GMT

ಹೊಸದಿಲ್ಲಿ,ಮೇ 3: ಭಾರತೀಯ ರೈಲ್ವೆಯು ಗಣನೀಯ ಪ್ರಮಾಣದಲ್ಲಿ ಉಳಿತಾಯವನ್ನು ಸಾಧಿಸುವಂತಾಗಲು ಎಲ್ಲ ಅಧಿಕ ಮೌಲ್ಯದ ಖರೀದಿಗಳಿಗೆ ಇಲೆಕ್ಟ್ರಾನಿಕ್ ರಿವರ್ಸ್ ಆಕ್ಷನ್(ಇಆರ್‌ಎ) ಅಥವಾ ವಿದ್ಯುನ್ಮಾನ ವಿಲೋಮ ಹರಾಜು ಪದ್ಧತಿಯನ್ನು ಜಾರಿಗೊಳಿಸುವಂತೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೂಚಿಸಿದ್ದಾರೆ. ಇಆರ್‌ಎ ವಿಲೋಮ ಅಥವಾ ಉಲ್ಟಾ ಹರಾಜು ಪ್ರಕ್ರಿಯೆಯಾಗಿದ್ದು,ಇಲ್ಲಿ ಮಾರಾಟಗಾರ ಮತ್ತು ಖರೀದಿದಾರರ ಸ್ಥಾನಗಳು ಅದಲು ಬದಲಾಗಿರುತ್ತವೆ. ಈ ಕ್ರಮದಿಂದಾಗಿ ರೈಲ್ವೆಯು ತನ್ನ ಖರೀದಿ ವೆಚ್ಚದಲ್ಲಿ ಶೇ.10ರಷ್ಟನ್ನು ಮತ್ತು ವಾರ್ಷಿಕ 20,000 ಕೋ.ರೂ.ವರೆಗೆ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಇಲಾಖೆಯಲ್ಲಿ ಪಾರದರ್ಶಕತೆಯನ್ನು ತರಲು,ವ್ಯವಹಾರ ನಿರ್ವಹಣೆಯನ್ನು ಸುಗಮಗೊಳಿಸಲು ಮತ್ತು ಪೂರೈಕೆದಾರರ ಕೂಟಗಳ ಏಕಸ್ವಾಮ್ಯವನ್ನು ತಡೆಯಲು ಈ ತಾಜಾ ಉಪಕ್ರಮ ನೆರವಾಗಲಿದೆ ಮತ್ತು ರೈಲ್ವೆಗೆ ಸಾಕಷ್ಟು ಮೊತ್ತವನ್ನು ಉಳಿತಾಯ ಮಾಡಲಿದೆ. ಪ್ರಸಕ್ತ ಭಾರತೀಯ ರೈಲ್ವೆಯ ವಾರ್ಷಿಕ ಬಂಡವಾಳ ವೆಚ್ಚವು 1,50,000 ಕೋ.ರೂ.ಗಳಾಗಿವೆ. ಇದರ ಜೊತೆಗೆ ಉತ್ಪಾದನೆ, ದಾಸ್ತಾನು,ಪ್ರಯಾಣಿಕರು ಮತ್ತು ಸರಕು ಸೇವೆಗಳು ಮತ್ತು ಇತರ ಸುರಕ್ಷತಾ ಸಂಬಂಧಿ ಕಾರ್ಯಗಳಿಗಾಗಿ ವಾರ್ಷಿಕ 50,000 ಕೋ.ರೂ.ಗಳ ಸರಕುಗಳನ್ನು ಖರೀದಿಸುತ್ತಿದೆ.

 ಸರಕುಗಳು ಮತ್ತು ಸೇವೆಗಳ ಪೂರೈಕೆ ಸೇರಿದಂತೆ ಎಲ್ಲ ಅಧಿಕ ವೌಲ್ಯದ ಖರೀದಿಗಳಿಗೆ ಇಆರ್‌ಎ ಜಾರಿಯು ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕ ಬಿಡಿಂಗ್‌ನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಅದು ಸರಕುಗಳು ಮತ್ತು ಸೇವೆಗಳ ಪೂರೈಕೆೆ ಹಾಗೂ ಕಾಮಗಾರಿ ನಿರ್ವಹಣೆ ಕ್ಷೇತ್ರಗಳಿಗೆ ಸಮಾನ ಪೈಪೋಟಿಯ ಅವಕಾಶವನ್ನೂ ಒದಗಿಸಲಿದೆ.

ಇಎಆರ್ ಸಂಪೂರ್ಣವಾಗಿ ವಿದ್ಯುನ್ಮಾನ ರೂಪದಲ್ಲಿ ನಡೆಯುವುದರಿಂದ ಮಾನವ ಹಸ್ತಕ್ಷೇಪವನ್ನು ನಿವಾರಿಸುತ್ತದೆ ಮತ್ತು ವಹಿವಾಟುಗಳನ್ನು ಕಾಗದರಹಿತವಾಗಿಸುತ್ತದೆ. ಹೀಗಾಗಿ ವ್ಯವಹಾರ ನಿರ್ವಹಣೆಯನ್ನು ಅದು ಸುಲಭಗೊಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News