×
Ad

ಪಕ್ಷದ ಚಿಹ್ನೆಯ ವಸ್ತುಗಳ ಸಾಗಾಟ: 2 ಪ್ರಕರಣ ದಾಖಲು

Update: 2018-05-03 21:19 IST

ಪುತ್ತೂರು, ಮೇ 3: ಪಕ್ಷದ ಚಿಹ್ನೆಗಳಿದ್ದ ಟೀ ಶರ್ಟ್, ಕ್ಯಾಪ್ ಸೇರಿದಂತೆ ಇತರ ವಸ್ತುಗಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಪುತ್ತೂರಿನ ಕಬಕ ಚೆಕ್ ಪೋಸ್ಟ್‌ನಲ್ಲಿ ಗುರುವಾರ ಪತ್ತೆ ಹಚ್ಚಿರುವ ಚುನಾವಣಾ ಫ್ಲೈಯಿಂಗ್ ಸ್ಕಾಡ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ (ಎಂಇಪಿ)ಯ ಚಿಹ್ನೆಯನ್ನು ಹೊಂದಿದ 232 ಟೀ ಶರ್ಟ್, 396 ಕ್ಯಾಪ್, 90 ಕೀ ಬಂಜ್, 120 ಪಾಕೆಟ್ ಕ್ಯಾಲೆಂಡರ್, 246 ಶಾಲು ಹಾಗೂ ಇತರ ವಸ್ತುಗಳನ್ನು ಇನ್ನೋವಾ ಕಾರಿನಲ್ಲಿ ತರುತ್ತಿದ್ದಾಗ ಕಬಕ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿ ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸೊತ್ತುಗಳ ಮೌಲ್ಯ ಸುಮಾರು ರೂ. 70 ಸಾವಿರ ಎಂದು ಅಂದಾಜಿಸಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿಗೆ ಸೇರಿದ ವಸ್ತುಗಳ ವಶ

ಇದೇ ಚೆಕ್‌ಪೋಸ್ಟ್‌ನಲ್ಲಿ ಬಿಜೆಪಿ ಪರ ಚಿಹ್ನೆಗಳಿದ್ದ 197 ಟೀ ಶರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಟೀ ಶರ್ಟ್ ಒಂದರ 22 ರೂ. ಬಿಲ್ ನಮೂದಾಗಿತ್ತು. ವಾಹನದಲ್ಲಿ ಕ್ಯಾಪ್, ಶಾಲು ಸೇರಿದಂತೆ ಇತರ ವಸ್ತುಗಳನ್ನೂ ಸಾಗಿಸಲಾಗುತ್ತಿದ್ದರೂ ಅವುಗಳಿಗೆ ಅಧಿಕೃತ ದಾಖಲೆಗಳಿದ್ದ ಕಾರಣ ವಾಪಾಸು ನೀಡಲಾಗಿದೆ. ಟೀ ಶರ್ಟ್‌ಗಳಿಗೆ ಸಂಬಂಧಪಟ್ಟಂತೆ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಅದನ್ನು ವಶಕ್ಕೆ ಪಡೆಯಲಾಗಿದೆ.

ಚುನಾವಣಾ ವೆಚ್ಚ ನಿಯಮದ ಪ್ರಕಾರ ಅನಧಿಕೃತವಾಗಿ ಹಾಗೂ ಮತದಾರರನ್ನು ಸೆಳೆಯುವ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿರುವುದರಿಂದ ವಸ್ತುಗಳನ್ನು ವಶಪಡಿಸಿಕೊಂಡು ಮಹಜರು ನಡೆಸಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಎಚ್. ಕೆ. ಕೃಷ್ಣಮೂರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News