×
Ad

ಸಿಎಂ ಆದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ: ಬಿಎಸ್‍ವೈ

Update: 2018-05-03 21:38 IST

ಕಡೂರು,ಎ.3: ಸಖರಾಪಟ್ಟಣ ಭಾಗದ ಅಯ್ಯನಕೆರೆ ಮತ್ತಿತರ ಕೆರೆಗಳನ್ನು ಹೆಬ್ಬೆ ಮೂಲಕ ತುಂಬಿಸುವ ಜವಾಬ್ದಾರಿಯನ್ನು ನಾನು ಹೊತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಅವರು ತಾಲೂಕಿನ ಸಖರಾಯಪಟ್ಟಣದ  ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಮೇ.18 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತ. ಕೇವಲ ನೀರಾವರಿಗಾಗಿಯೇ 1ಲಕ್ಷ ಕೋಟಿ ಮೀಸಲಿಡುವ ಮೂಲಕ ರಾಜ್ಯದ ನೀರಾವರಿ ಯೋಜನೆಗಳನ್ನು ಸಂಪೂರ್ಣಗೊಳಿಸುತ್ತೇನೆ. ಹೆಬ್ಬೆ ಯೋಜನೆ ಮೂಲಕ ಅಯ್ಯನಕೆರೆ ಮತ್ತು ಇತರೆ 62ಕೆರೆ ತುಂಬಿಸುವ ಜವಾಬ್ದಾರಿ ನನ್ನದು ಎಂದರು.

ಬ್ಯಾಂಕ್ ಸಾಲಮನ್ನಾ, ಸಹಕಾರಿ ಸಂಘಗಳ ಸಾಲವೂ ಸೇರಿದಂತೆ ಸಾಲಮನ್ನಾ ಮಾಡುತ್ತೇನೆ. ವಿದ್ಯಾರ್ಥಿಗಳಿಗೆ ಡಿಗ್ರಿವರೆಗೆ ಉಚಿತ ಶಿಕ್ಷಣ ನೀಡಲು ಯೋಜಿಸಿದ್ದೇನೆ. ರೈತರು ಬೆಳೆದ ಮೆಕ್ಕೆಜೋಳವನ್ನು ರೂ.1500 ಬೆಂಬಲಬೆಲೆಯಲ್ಲಿ ಖರೀದಿಸುವುದಲ್ಲದೆ  5 ಸಾವಿರ ಕೋಟಿ ರೈತ ಆವರ್ತ ನಿಧಿ ಸ್ಥಾಪನೆ ಮಾಡಿ ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ಬೆಳೆಯಲು ಖರ್ಚು ಮಾಡಿದ ಮೂರು ಪಟ್ಟು ಬೆಲೆ ಸಿಗುವಂತೆ ಮಾಡುತ್ತೇನೆ. ಇವೆಲ್ಲವೂ ನನಸಾಗಬೇಕಾದರೆ ಬಿಜೆಪಿಗೆ ಮತ ನೀಡಿ ಎಂದು ಕೋರಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಈ ಚುನಾವಣೆ ಧರ್ಮ ಅಧರ್ಮಗಳ ನಡುವೆ, ಸತ್ಯ ಅಸತ್ಯ, ಸಾಮರಸ್ಯ ಜಾತಿವಾದದ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಸಿದ್ದರಾಮಯ್ಯನವರ ಸರ್ಕಾರ ಜಾತಿಗಳ ನಡುವೆ ಸಂಘರ್ಷ ತಂದಿಟ್ಟಿದ್ದೇ ದೊಡ್ಡ ಸಾಧನೆ. ವೀರಶೈವ ಲಿಂಗಾಯಿತರ ನಡುವೆ ಜಗಳ ತಂದು ಕಂದಕ ಸೃಷ್ಟಿಸಿದರು. ಒಂದು ಕೋಮಿಗೆ ಶಾದೀಭಾಗ್ಯ ನೀಡಿದರು. ಇಂತಹ ಒಡೆದು ಆಳುವ ನೀತಿಯ ಸರ್ಕಾರ ಬೇಕೆ ಎಂದು ಪ್ರಶ್ನಿಸಿದರು.

ಅಭ್ಯರ್ಥಿ ಸಿ.ಟಿ.ರವಿ ಮಾತನಾಡಿ, ಎಲ್ಲ ಮಾಡಿದ್ದೇನೆಂಬ ಭ್ರಮೆಯಿಲ್ಲ. ಆದರೆ ಏನೂ ಮಾಡಿಲ್ಲ ಎಂದು ದೂರಲು ಅವಕಾಶ ನೀಡಿಲ್ಲ. ಕರಗಡ ಕೇವಲ ಪೇಪರ್ ಮೇಲೆ ತೋರಿಸುತ್ತಿದ್ದರು. ಅದು ಮಂಜೂರಾಗಿದ್ದು ಯಡಿಯೂರಪ್ಪನವರ ಕಾಲದಲ್ಲಿ. ಈಗ ಆ ಯೋಜನೆ ಸಂಪೂರ್ಣವಾಗಿದೆ. ಮಳೆಯಿಲ್ಲದೆ ನೀರು ಹರಿದಿಲ್ಲ. ಅದಕ್ಕೆ ನಾವು ಕಾರಣವಲ್ಲ. ಎಲೆಕ್ಷನ್ ವೇಷಧಾರಿಗಳಿಗೆ ಈ ಸಮಯದಲ್ಲಿ ಅಯ್ಯನಕೆರೆ, ಹೆಬ್ಬೆ ನೆನಪಿಗೆ ಬಂದಿದೆ. 63ಕೆರೆಗಳಿಗೆ ನೀರುಣಿಸುವ ಯೋಜನೆಗೆ ಡಿ.ಪಿ.ತಯಾರಿಸಿ ಹಣ ಕೇಳಿದರೆ ಸಿದ್ದರಾಮಯ್ಯ ನೀಡಲಿಲ್ಲ. ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿದರೆ ಅದಕ್ಕೆ ಹಣ ಕೊಡದ ಕಾಂಗ್ರೆಸ್ ಸರ್ಕಾರ ಮತದಾರರನ್ನು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತದೆ? ಅಡ್ರಸ್ಸೇ ಇಲ್ಲದವರು ಚುನಾವಣೆಗೆ ನಿಂತಿದ್ದಾರೆ. ಅಡ್ರೆಸ್ಸ್ ಇಲ್ಲದ ಜಾಗಕ್ಕೆ ಹೋಗಬೇಕು. ಬಹುಮತದಿಂದ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್, ಕಲ್ಮರುಡಪ್ಪ, ಬೀರೂರು ದೇವರಾಜ್, ಲಕ್ಷ್ಮಣ್ ನಾಯಕ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಈಶ್ವರಹಳ್ಳಿ ಮಹೇಶ್. ಬೆಳವಾಡಿ ರವೀಂದ್ರ. ಲಕ್ಷ್ಮಣ್‍ನಾಯಕ್ ಕೃಷ್ಣಸ್ವಾಮಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News